ಜಿಲ್ಲೆ

ಪಟಾಕಿ ಸಿಡಿಸುವವರ ಹಾವಳಿ: ಕ್ರಮಕೈಗೊಳ್ಳಿ ಎಂದು ಮಾಜಿ ಸಚಿವರಿಂದ ಪೊಲೀಸರಿಗೆ ದೂರು..

ಬೆಂಗಳೂರು: ಸಾಮಾನ್ಯವಾಗಿ ದೀಪಾವಳಿ ಸಮೀಪ ಇರುವಾಗಷ್ಟೇ ಪಟಾಕಿ ಹಾವಳಿ ವಿರುದ್ಧ ದೂರು ಹಾಗೂ ಅಸಮಾಧಾನಗಳು ಕೇಳಿ ಬರುತ್ತವೆ. ಆದರೆ ಇದೀಗ ದೀಪಾವಳಿ ಹತ್ತಿರ ಇರದಿದ್ದರೂ ಪಟಾಕಿ ಸಿಡಿಸುವವರು ವಿರುದ್ಧ ಪೊಲೀಸರಿಗೆ ದೂರು ಹೋಗಿದೆ. ಅದರಲ್ಲೂ ಮಾಜಿ ಸಚಿವರೊಬ್ಬರು ಈ ದೂರು ನೀಡಿದ್ದಾರೆ.

ಪ್ರತಿ ದಿನ ರಾತ್ರಿ 10 ಗಂಟೆಯ ನಂತರ ನಗರದಲ್ಲಿ ವಿವಿಧ ಕಾರಣಗಳಿಗಾಗಿ ಪಟಾಕಿ ಸಿಡಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಐಪಿಎಲ್ ಪಂದ್ಯಗಳ ಫಲಿತಾಂಶಗಳೂ ಕಾರಣವಿರಬಹುದು. ಕೆಲವು ಬಾರಿ ಮಧ್ಯರಾತ್ರಿಯಲ್ಲಿ “ಹುಟ್ಟಿದ ಹಬ್ಬ” ಆಚರಿಸುವ ನೆಪದಲ್ಲಿ ಪಟಾಕಿ ಸಿಡಿಸುತ್ತಿರುವ ಮಾಹಿತಿಯೂ ತಿಳಿದು ಬಂದಿದೆ. ಇದಕ್ಕೆ ಯಾವುದೇ ರೀತಿಯಲ್ಲಿ ಆಸ್ಪದ ಕೊಡಬಾರದು ಎಂದು ತಮ್ಮಲ್ಲಿ ಕೋರುತ್ತೇನೆ ಎಂದು ಮಾಜಿ ಸಚಿವ ಎಸ್. ಸುರೇಶ್​ ಕುಮಾರ್​ ಪೊಲೀಸರಿಗೆ ಪತ್ರ ಮುಖೇನ ತಿಳಿಸಿದ್ದಾರೆ.

ಈ ರೀತಿ ಪಟಾಕಿ ಹೊಡೆಯುವುದರಿಂದ ಎಳೆ ಮಕ್ಕಳಿಗೆ, ವಯೋವೃದ್ಧರಿಗೆ, ವಿವಿಧ ರೀತಿಯ ಖಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ರಾತ್ರಿಯ ಹೊತ್ತಿನಲ್ಲಿ ತೀವ್ರ ತೊಂದರೆಯುಂಟಾಗುತ್ತದೆ. ಅಲ್ಲದೆ ಪಶು ಪಕ್ಷಿಗಳಿಗೂ ಈ ಕರ್ಕಶ ಶಬ್ದವು ಆಘಾತ ಉಂಟು ಮಾಡಿ ಅವುಗಳ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಇಂತಹ ಘಟನೆಗಳಿಗೆ ಆಸ್ಪದ ನೀಡದಂತೆ ಹಾಗೂ ಈ ರೀತಿಯ ಘಟನೆಗಳು ಪತ್ತೆಯಾದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲು ತಮ್ಮ ವಲಯದ ಎಲ್ಲಾ ಹೊಯ್ಸಳ ಸಿಬ್ಬಂದಿ ಮತ್ತು ಬೀಟ್ ಕರ್ತವ್ಯದಲ್ಲಿ ತೊಡಗಿರುವ ಸಿಬ್ಬಂದಿ ವರ್ಗದವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಎಂಬುದಾಗಿ ಅವರು ಕೋರಿದ್ದಾರೆ.