ಜಿಲ್ಲೆ

ಕಾಂಗ್ರೆಸ್ ಸರ್ಕಾರದ ವಿರೋಧಿ ನೀತಿಗೆ ಖಂಡನೆ

ಹೊನ್ನಾಳಿ: ಹೊನ್ನಾಳಿ- ನ್ಯಾಮತಿ ತಾಲೂಕಿನ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚದಿರುವುದು, ದಲಿತ ಮೀಸಲಾತಿ ಮತ್ತು ರೈತ ವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ತಾಲೂಕು ಬಿಜೆಪಿ ಘಟಕ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

ಈ ವೇಳೆ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ರಾಜ್ಯಾದ್ಯಂತ ಎಷ್ಟು ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗಿದೆ ಮತ್ತು ಎಷ್ಟು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂಬುದಕ್ಕೆ ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸಿದರು.

ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಶೂನ್ಯ ಅಭಿವೃದ್ಧಿ ಸಾಧಿಸಿದೆ. ನಿಮ್ಮಂತೆಯೇ ಚುನಾವಣೆ ಭರವಸೆ ನೀಡಿ ಅಧಿಕಾರಕ್ಕೆ ಬಂದ ಆಂಧ್ರಪ್ರದೇಶದ ಸಿಎಂ ರೇವಂತ್ ರೆಡ್ಡಿ, ಸರ್ಕಾರದಲ್ಲಿ ಸರ್ಕಾರಿ ನೌಕರರಿಗೆ ವೇತನ ನೀಡಲು ಹಣವಿಲ್ಲ ಎಂದು ಹೇಳಿದ್ದಾರೆ. ರಾಜ್ಯದಲ್ಲೂ ಇಂತಹ ಸ್ಥಿತಿ ಇದ್ದರೂ ಸಾಲ ಮಾಡಿ ರಾಜ್ಯ ನಡೆಸುತ್ತಿದ್ದೀರಿ ಎಂದು ದೂರಿದರು.

ಶಾಸಕರು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ 400 ಕೋಟಿ ರೂ. ಬಿಡುಗಡೆ ಮಾಡಿಸಿದ್ದಿನಿ ಎಂದು ಸುಳ್ಳು ಹೇಳಿದ್ದಾರೆ. ಶಾಲಾ ಕಟ್ಟಡಗಳು, ಏತ ನೀರಾವರಿ, ಭದ್ರಾ ನಾಲೆ ಹಾಗೂ ತುಂಗಾ ನಾಲೆ ಆಧುನೀಕರಣ ಆಗಿದ್ದು ಕೂಡ ನಮ್ಮ ಅವಧಿಯಲ್ಲಿ. ಕಳೆದ ಎರಡುವರೆ ವರ್ಷದಲ್ಲಿ 25 ಕೋಟಿ ರೂ.ನಲ್ಲಿ 14 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. 11 ಕೋಟಿ ರೂ. ಬಿಡುಗಡೆಯಾಗ ಬೇಕಿದೆ. ಸರ್ಕಾರ ಪ್ರತಿ ಶಾಸಕರಿಗೆ 50 ಕೋಟಿ ರೂ. ಕೊಡುತ್ತೇನೆ ಎಂದು ಹೇಳಿದೆ, ಆದರೆ ಹಣ ಬಿಡುಗಡೆ ಮಾಡಿಲ್ಲ. ಶಾಸಕರು ರಸ್ತೆ ಅಭಿವೃದ್ಧಿಗೆ 50 ಕೋಟಿ ರೂ. ಹಣ ಕೊಡುತ್ತೇನೆ ಎಂದು ಹೇಳಿದ್ದಾರೆ. ಇದೆಲ್ಲ ಸುಳ್ಳು, ಹಣ ಬಿಡುಗಡೆಯಾಗದೆ ರಸ್ತೆ ಅಭಿವೃದ್ಧಿ ಆಗುವುದು ಯಾವಾಗ ಎಂದು ಪ್ರಶ್ನಿಸಿದರು.

ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಅರಕೆರೆ ನಾಗರಾಜ್, ನಿಕಟಪೂರ್ವ ಅಧ್ಯಕ್ಷ ಸುರೇಶ್, ನೆಲಹೊನ್ನೆ ಮಂಜುನಾಥ್ ಮಾತನಾಡಿದರು.

ಪುರಸಭೆ ಮಾಜಿ ಅಧ್ಯಕ್ಷ ರಂಗನಾಥ್, ಮಾರುತಿ ನಾಯ್್ಕ ಎಸ್.ಎಸ್. ಬೀರಪ್ಪ, ಕುಂದೂರು ಅನಿಲ್, ಕೋನಾಯಕನಹಳ್ಳಿ ಮಂಜುನಾಥ್, ಮಾದೇನಹಳ್ಳಿ ನಾಗರಾಜ್, ದೇವನಾಯಕನಹಳ್ಳಿ ಶ್ರೀನಿವಾಸ್, ಪೇಟೆ ಪ್ರಶಾಂತ್ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.