ಹೊನ್ನಾಳಿ: ದೇಶದ ಸಂಪತ್ತಾದ ವಿದ್ಯಾರ್ಥಿಗಳು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ ಪಾಲಕರಿಗೆ, ಶಿಕ್ಷಕರಿಗೆ ಹಾಗೂ ನಾಡಿಗೆ ಕೀರ್ತಿ ತಂದ ಹಾಗೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಹಿರೇಕಲ್ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ ಹಾಗೂ ವಿವಿಧ ವೇದಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಾಧನೆ ಮಾತಾಗಬೇಕು, ಮಾತೇ ಸಾಧನೆಯಾಗಬಾರದು. ಸಾಧಕರಾಗಿ ದೇಶದ ಅಭಿವೃದ್ಧಿಯಲ್ಲಿ ನಿಮ್ಮ ಪಾಲು ಇರಬೇಕು, ಆ ರೀತಿಯಲ್ಲಿ ಯಶಸ್ಸು ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪೆಹಲ್ಗಾಮ್ಲ್ಲಿ ಉಗ್ರರು ಭಾರತೀಯ ಪ್ರವಾಸಿಗರನ್ನು ಧರ್ಮ ಕೇಳಿ ಗುಂಡಿಟ್ಟು ಸಾಯಿಸಿದಾಗ ಪ್ರಧಾನಿ ನರೇಂದ್ರ ಮೋದಿಯವರು ಆಪರೇಷನ್ ಸಿಂಧೂರ ಎಂಬ ಮೂಲಕ ಉಗ್ರರಿಗೆ ತಕ್ಕ ಪಾಠ ಕಲಿಸಿದರು. ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಭಾರತೀಯ ವೀರಯೋಧರಿಗೆ ಇಡೀ ದೇಶ ನಮನ ಸಲ್ಲಿಸಿದೆ ಎಂದರು.
ಪ್ರಭಾರ ಪ್ರಾಚಾರ್ಯ ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, 1982 ರಲ್ಲಿ ಹಿರೇಕಲ್ಮಠದ ಗುರುಗಳಾಗಿದ್ದ, ಶಿಕ್ಷಣ ಪ್ರೇಮಿ ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಗ್ರಾಮೀಣ ಮಟ್ಟದ ಮಕ್ಕಳಿಗಾಗಿ ಮೊದಲ ಬಾರಿಗೆ ಹೊನ್ನಾಳಿಗೆ ಪ್ರಥಮ ದರ್ಜೆ ಕಾಲೇಜನ್ನು ಮಂಜೂರು ಮಾಡಿಸಿದರು. ನಂತರ 1987 ರಲ್ಲಿ ಕಾಲೇಜು ಅನುದಾನಕ್ಕೆ ಒಳಪಟ್ಟಿತು. ಇಲ್ಲಿ ವ್ಯಾಸಂಗ ಮಾಡಿದ ಸಹಸ್ರಾರು ವಿದ್ಯಾರ್ಥಿಗಳು ಇಂದು ನಾಡಿನ ವಿವಿಧೆಡೆ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ವಿವಿಧ ಕ್ರೀಡೆಯಲ್ಲಿ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಬಹುಮಾನ ಹಾಗೂ ಸಮಗ್ರ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಮತ್ತು 2023-24 ರಲ್ಲಿ ಬಿಎ ಪದವಿಯಲ್ಲಿ 3 ನೇ ರ್ಯಾಂಕ್ ಪಡೆದ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾಂಕಾ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಆಡಳಿತ ಮಂಡಳಿ ಸದಸ್ಯರಾದ ತೆಂಗಿನಮರದ ಮಾದಪ್ಪ, ಎಂ.ಪಿ.ಎಂ. ಚನ್ನಬಸಯ್ಯ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ ನರಗಟ್ಟಿ ನಿರೂಪಿಸಿದರು.