ಜಿಲ್ಲೆ

ರೈತರಿಗೆ ದ್ರೋಹವೆಸಗಿದ ರಾಜ್ಯಸರ್ಕಾರ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ವಾಗ್ದಾಳಿ

ಮಂಡ್ಯ: ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಮಾತುಕೊಟ್ಟಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ನೀರು ಬಿಟ್ಟು ರೈತರಿಗೆ ದ್ರೋಹ ಮಾಡಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಮಾತನಾಡಿದ ಅವರು, ಕಾವೇರಿ ಕೊಳ್ಳದ ಜಲಾಶಯಗಳ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ರಾಜ್ಯಸರ್ಕಾರ ಸಂಪೂರ್ಣ ವಿಫಲವಾಗಿದೆ. ಕುಡಿಯುವ ನೀರನ್ನು ಸಹ ಬರಿದು ಮಾಡಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಲು ಸರ್ಕಾರ ಮುಂದಾಗಿದೆ ಎಂದು ಕಿಡಿಕಾರಿದರು.

ಬೆಳೆದು ನಿಂತಿರುವ ಬೆಳೆ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಹೊಸ ಬೆಳೆ ಹಾಕಲು ನೀರು ಕೊಡಲಿಲ್ಲ. ಇದೀಗ ಕುಡಿಯಲು ಸಹ ನೀರಿಲ್ಲದಂತೆ ಜಲಾಶಯದಿಂದ ನೀರು ಹರಿಸುತ್ತಿದೆ. ಜಿಲ್ಲೆಯ ಶಾಸಕರು, ಸಂಸದರು ಕಣ್ಮುಚ್ಚಿ ಕುಳಿತಿದ್ದಾರೆ. ಕಾವೇರಿ ಕೊಳ್ಳದ ಜಲಾಶಯಗಳ ವಾಸ್ತವ ಪರಿಸ್ಥಿತಿ ಅವಲೋಕಿಸದೆ. ನೀರಿನ ಲಭ್ಯತೆ ಅರಿಯದೆ ಅವ್ಯೆಜ್ಞಾನಿಕವಾಗಿ ನೀರು ಬಿಡಲು ಆದೇಶ ಮಾಡಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರದ್ದು ಮಾಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಜಿ.ಬಿ.ಶಿವಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ರೈತ ಹಿತರಕ್ಷಣಾ ಸಮಿತಿಯ ಸುನಂದಾ ಜಯರಾಂ, ಎಂ.ಎಸ್.ಆತ್ಮಾನಂದ, ಕೆ.ಬೋರಯ್ಯ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ದಸಂಸ ಮುಖಂಡ ವೆಂಕಟಗಿರಿಯಯ್ಯ, ರೈತ ಸಂಘದ ಇಂಡವಾಳು ಚಂದ್ರಶೇಖರ್, ಮುದ್ದೇಗೌಡ, ಅಂಬುಜಮ್ಮ ಇತರರಿದ್ದರು.