ಜಿಲ್ಲೆ

ಕಂಕನಾಡಿ ನಮಾಜ್ ವಿವಾದ ಅನಗತ್ಯ ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿಕೆ

ಮಂಗಳೂರು: ಕಂಕನಾಡಿ ಮಸೀದಿ ಹೊರಗಡೆ ನಡೆದ ನಮಾಜ್ ವಿವಾದ ಅನಗತ್ಯ. ಎಲ್ಲರಿಗೂ ದೇವರು ಒಬ್ಬರೇ. ಮಸೀದಿ ಹೊರಗಡೆ ಪ್ರಾರ್ಥನೆ ಮಾಡಿದ ಸಣ್ಣ ವಿಚಾರಕ್ಕೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವ ಅಗತ್ಯ ಇರಲಿಲ್ಲ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.


ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಧರ್ಮಗಳ ಕಾರ್ಯಕ್ರಮಗಳು ಕೆಲವೊಮ್ಮೆ ರಸ್ತೆಯಲ್ಲಿ ನಡೆಯುತ್ತದೆ. ಅದನ್ನು ತಪ್ಪು ಎಂದು ಹೇಳುತ್ತಾ ಹೋಗಲು ಸಾಧ್ಯ ಇಲ್ಲ. ಜಿಲ್ಲೆಯಲ್ಲಿ ಪ್ರಚೋದನಕಾರಿ ಭಾಷಣ, ಕೃತ್ಯ ನಡೆದಾಗಲೂ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿಲ್ಲ. ಇಂತಹ ಸಣ್ಣ ವಿಷಯವನ್ನು ರಂಪಾಟ ಮಾಡುವ ಅಗತ್ಯ ಇರಲಿಲ್ಲ. ಪ್ರಾರ್ಥನೆಯ ವಿಡಿಯೋ ಮಾಡಿ ಸೌಹಾರ್ದತೆಗೆ ಧಕ್ಕೆ ತರುವ ಕಾರ್ಯ ಮಾಡಿದವರ ಮೇಲೆ ಕ್ರಮ ಆಗಬೇಕು ಎಂದು ರಮಾನಾಥ ರೈ ಹೇಳಿದರು.


ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಅವರಿಗೆ ಕ್ಷೇತ್ರದ ಮತದಾರರು ಬೆಂಬಲ ನೀಡಬೇಕು ಎಂದು ಮಾಜಿ ಸಚಿವ ರೈ ಮನವಿ ಮಾಡಿದರು.


ಕಾಂಗ್ರೆಸ್ ಸರ್ಕಾರದಿಂದ ಯುವಕರ ಸಮಸ್ಯೆ ಅರ್ಥ ಮಾಡಿಕೊಂಡು ಅವರಿಗೆ ಸ್ಪಂದಿಸುವ ಕಾರ್ಯ ಆಗಲಿದೆ. ಹಳೇ ಪಿಂಚಣಿ ಜಾರಿ ಮಾಡುವ ಭರವಸೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದು, ಆ ಭರವಸೆ ಈಡೇರಿಸಲಾಗುವುದು. ಜಿಲ್ಲೆಯಲ್ಲಿ ಶಾಲೆಗಳು ಹೆಚ್ಚು ಇರುವ ನಡುವೆಯೂ ಸಮಸ್ಯೆಗಳೂ ಹಲವು ಇವೆ. ಸರ್ಕಾರಿ ಶಾಲೆಗಳ ಮೂಲಭೂತ ಸಮಸ್ಯೆ, ಶಿಕ್ಷಕರ ಸಮಸ್ಯೆ ಬಗೆ ಹರಿಸಲು ಕಾಂಗ್ರೆಸ್ ಸರ್ಕಾರ ಕ್ರಮ ವಹಿಸುತ್ತಿದೆ. ಹಳೇ ಪಿಂಚಣಿ ಮರು ಜಾರಿಗೆ ಪ್ರಯತ್ನಿಸಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡಬೇಕು ಎಂದು ರಮಾನಾಥ ರೈ ಆಗ್ರಹಿಸಿದರು.


ಜಿಲ್ಲೆಯಲ್ಲಿ ಸೌಹಾರ್ದತೆ ಕದಡುವ ಕಾನೂನು ಬಾಹಿರ ಕೆಲಸ ಆದಾಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವುದು ಸಹಜ. ಆದರೆ ಈ ರೀತಿಯ ಸಣ್ಣ ವಿಚಾರದಲ್ಲಿ ಸಂಬಂಧಪಟ್ಟವರನ್ನು ಕರೆಸಿ ಬುದ್ಧಿವಾದ ಹೇಳುವ ಕೆಲಸ ಪೊಲೀಸ್ ಇಲಾಖೆಯಿಂದ ಆಗಬೇಕಿತ್ತು ಎನ್ನುವುದು ನಮ್ಮ ಅನಿಸಿಕೆ ಎಂದು ಪದ್ಮರಾಜ್ ಹೇಳಿದರು.


ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶುಭೋದಯ ಆಳ್ವ, ಅಶ್ರಫ್ ಕೆ., ಅಪ್ಪಿ, ಶಶಿಕಲಾ, ಶಶಿಧರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.