ಜಿಲ್ಲೆ

ಅಂಬೇಡ್ಕರ್’ಗೆ ಅವಮಾನ ಮಾಡಿದರೆ ಪ್ರತ್ಯೇಕತೆಯ ಕೂಗು ಏಳಲಿದೆ : ಮಾಜಿ ಮೇಯರ್ ಪುರುಷೋತ್ತಮ್ ಎಚ್ಚರಿಕೆ

ಮೈಸೂರು: ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದರೆ ಪ್ರತ್ಯೇಕತೆಯ ಕೂಗು ಏಳಲಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ಎಚ್ಚರಿಸಿದರು.

ಕರ್ನಾಟಕ ಅಂಬೇಡ್ಕರ್ ಸೇನೆ ರಾಜ್ಯ ಮತ್ತು ಲ್ಲಾ ಸಮಿತಿ ವತಿಯಿಂದ ಇಲ್ಲಿನ ರೋಟರಿ ಸಭಾಂಗಣದಲ್ಲಿ ಭಾನುವಾರ ಆಯೋಜಿ ಸಿದ್ದ ಬಿ.ಆರ್.ಅಂಬೇಡ್ಕರ್ 68ನೇ ಪರಿನಿಬ್ಬಾಣ ದಿನಾಚರಣೆ, ವಿಚಾರ ಸಂಕಿರಣ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಕುರಿತು ಅವಹೇಳನಕಾರಿ ಮಾತುಗಳನ್ನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಇದುವರೆಗೆ ಕ್ಷಮೆ ಕೇಳುವುದಕ್ಕೂ ಹೋಗಿಲ್ಲ. ಇಂಥ ಆಡಳಿತಗಾರರು ಮುಂದುವರೆದರೆ ಪ್ರತ್ಯೇಕತೆ ಅನಿವಾರ್ಯವಾಗುತ್ತದೆ. ಹಾಗಾಗಿ ಕೂಡಲೇ ಅಮಿತ್ ಷಾ ರಿಂದ ರಾಜೀನಾಮೆ ಪಡೆಯಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಅಂಬೇಡ್ಕರ್ ಏನಾದರು ಮೇಲ್ವರ್ಗದಲ್ಲಿ ಜನಿಸಿದ್ದರೆ ಅವರ ಜ್ಞಾನಕ್ಕೆ ಅವರು ದೇಶದ ಪ್ರಥಮ ಪ್ರಧಾನಿಯಾಗುತ್ತಿದ್ದರು. ಆದರೆ, ತಳ ಸಮುದಾಯದಲ್ಲಿ ಜನಿಸಿದ ಹಿನ್ನೆಲೆಯಲ್ಲಿ ಅಂತಹ ಒಂದು ಅವಕಾಶದಿಂದ ವಂಚಿತರಾದರು. ದೇಶದಲ್ಲಿ ಇನ್ನೂ ಬಡತನ, ತಾರತಮ್ಯ, ಅಸ್ಪೃಶ್ಯತೆ ಹೋಗಿಲ್ಲ. ಇಲ್ಲಿ ಸ್ವಲ್ಪವಾದರೂ ಸಮಾನತೆ ನಿರ್ಮಾಣವಾಗಿದೆ ಎಂದರೆ ಅದಕ್ಕೆ ಅಂಬೇಡ್ಕರ್ ಕಾರಣ ಎಂದರು.

ತಿ.ನರಸೀಪುರದ ನಳಂದ ಬುದ್ಧವಿಹಾರದ ಬೋಧಿರತ್ನ ಭಂತೇ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದರಾಜು ಹನುಮನಪುರ, ಅಹಿಂದ ಮುಖಂಡ ಜೆ.ಚಿಕ್ಕಜವರಪ್ಪ, ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ನಾಗೇಂದ್ರ ಬಸವಟ್ಟಿಗೆ, ಕಾಂಗ್ರೆಸ್ ಮುಖಂಡ ವಿ.ಸಿ.ಶ್ರೀನಿವಾಸಮೂರ್ತಿ, ಸಮಿತಿ ಜಿಲ್ಲಾಧ್ಯಕ್ಷ ಅಭಿಲಾಷ್ ಎಂ.ಸಿ.ಮೂಕನಹಳ್ಳಿ ಇದ್ದರು.