ಜಿಲ್ಲೆ

ರೈತರಿಗೆ ನೀರು ಕೊಟ್ಟು ಜಲಪಾತೋತ್ಸವ ಆಚರಿಸಿ: ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆಗ್ರಹ

ಕೆ.ಎನ್.ರಾಘವೇಂದ್ರ

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿದೆ. ಆದಾಗ್ಯೂ ಮಳವಳ್ಳಿ ತಾಲೂಕಿನ ಕೆರೆ ಕಟ್ಟೆಗಳನ್ನು ತುಂಬಿಸಿಲ್ಲ. ಇದರಿಂದಾಗಿ ಕೃಷಿ ಮಾಡದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಮೊದಲು ರೈತರಿಗೆ ನೀರು ಕೊಟ್ಟು ಆನಂತರ ಗಗನಚುಕ್ಕಿ ಜಲಪಾತೋತ್ಸವ ಆಚರಿಸಿ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆಗ್ರಹಿಸಿದರು.

ಮಳವಳ್ಳಿ ತಾಲೂಕು ಅರೆ-ಬರೆ ನೀರಾವರಿ ಪ್ರದೇಶ. ಕೆಆರ್‌ಎಸ್‌ನಲ್ಲಿ ನೀರಿದ್ದರೂ ಕೆರೆ ಕಟ್ಟೆಗಳು ಖಾಲಿಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮ ಅವಶ್ಯಕವಾಗಿತ್ತೇ?. ಆದ್ದರಿಂದ ಇನ್ನೊಂದು ವಾರದಲ್ಲಿ ಮಳವಳ್ಳಿ ತಾಲೂಕಿನ ಕೆರೆ ಕಟ್ಟೆಗಳನ್ನು ತುಂಬಿಸಿ ಗಗನಚುಕ್ಕಿ ಜಲಪಾತೋತ್ಸವ ಮಾಡಲಿ, ಅದಕ್ಕೆ ನಮ್ಮ ಅಭ್ಯಂತರವೇನಿಲ್ಲ. ಆದರೆ, ತಾಲೂಕಿನ ಯಾವುದೇ ಕೆರೆಗಳು ತುಂಬದೆ ಬಣಗುಡುತ್ತಿವೆ. ಇದರಿಂದಾಗಿ ರೈತರು ವ್ಯವಸಾಯ ಮಾಡದೆ ಒಂದು ಊಟಕ್ಕೂ ಪರಿತಪಿಸುತ್ತಿದ್ದಾರೆ. ಮೊದಲು ರೈತರಿಗೆ ನೀರು ಕೊಟ್ಟು ಅವರನ್ನು ಸಂತೃಪ್ತಿಪಡಿಸಲಿ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕಳೆದ ತಿಂಗಳು ಕೆಆರ್‌ಎಸ್ ಡ್ಯಾಂನಿಂದ ಯಥೇಚ್ಛವಾಗಿ ನೀರನ್ನು ಹರಿಸಿದಾಗ ಗಗನಚುಕ್ಕಿ ಮೈದುಂಬಿ ಹರಿಯುತ್ತಿತ್ತು. ಆ ಸಮಯದಲ್ಲೇ ಜಲಪಾತೋತ್ಸವ ಮಾಡಬಹುದಿತ್ತು. ಪ್ರಸ್ತುತ ನೀರಿಲ್ಲದ ಸಂದರ್ಭ ಕೆಆರ್‌ಎಸ್‌ನಿಂದ ಹೆಚ್ಚುವರಿ ನೀರನ್ನು ಬಿಟ್ಟುಕೊಂಡು ಉತ್ಸವ ಮಾಡುವ ಪ್ರಮೇಯವಾದರೂ ಏನು?. ಉತ್ಸವದ ನೆಪದಲ್ಲಿ ತಮಿಳುನಾಡಿಗೆ ನೀರು ಹರಿಸುವ ಹುನ್ನಾರವೇ ಎಂದು ಪ್ರಶ್ನಿಸಿದ ಅವರು, ಜಲಪಾತೋತ್ಸವಕ್ಕೆ ಕೆಆರ್‌ಎಸ್‌ನಿಂದ ನೀರನು ಹರಿಸುವ ಬದಲು ಅದೇ ನೀರನ್ನು ನಾಲೆಗಳ ಮೂಲಕ ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಲಿ. ಒಂದು ವೇಳೆ ಕೆರೆ-ಕಟ್ಟೆ ತುಂಬಿಸದೆ ಜಲಪಾತೋತ್ಸವ ಮಾಡಲು ಹೊರಟರೆ ಅದಕ್ಕೆ ಜೆಡಿಎಸ್ ಅವಕಾಶ ಕೊಡಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂದಾಗ ಕಪ್ಪು ಬಾವುಟ ಪ್ರದರ್ಶಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು

ಮಳವಳ್ಳಿ ತಾಲೂಕಿಗೆ ಸಮರ್ಪಕವಾಗಿ ನೀರು ಹರಿಯದ ಕಾರಣ ಶೇ.25 ರಿಂದ 30ರಷ್ಟು ಮಾತ್ರ ನಾಟಿ ಆಗಿದೆ. ಇದರಲ್ಲಿ ಪಂಪ್‌ಸೆಟ್ ಅಳವಡಿಸಿಕೊಂಡಿರುವವರದೂ ಸೇರಿದೆ. ಆದರೆ, ಕೃಷಿ ಮತ್ತು ನೀರಾವರಿ ಇಲಾಖಾ ಅಧಿಕಾರಿಗಳು ಶೇ.50ರಷ್ಟಾಗಿದೆ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ತಾಲೂಕಿನ ನಾಲೆಗಳಿಗೆ ನೀರು ಹರಿದಿಲ್ಲ. ಮಾಧವ ಮಂತ್ರಿ, ರಾಮಸ್ವಾಮಿ, ಹೆಬ್ಬಕವಾಡಿ, ವಿಶ್ವೇಶ್ವರಯ್ಯ ನಾಲೆ, ಹೆಬ್ಬಳ್ಳ ಚೆನ್ನಯ್ಯ ನಾಲೆಗಳಲ್ಲಿ ನೀರು ಹರಿಯುತ್ತಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ. ಮಾರೇಹಳ್ಳಿ ಹಾಗೂ ಮಳವಳ್ಳಿ ಕೆರೆಗಳು ಭರ್ತಿಯಾಗದೆ ಸಂಪರ್ಕ ಕೆರೆಗಳಿಗೂ ನೀರು ಹರಿದಿಲ್ಲ. ಇದರಿಂದಾಗಿ ಕೃಷಿ ಜಮೀನುಗಳು ಒಣಗಿವೆ ಎಂದು ಆಕ್ರೋಶ ಹೊರಹಾಕಿದರು.

ಇಂಜಿನಿಯರ್‌ಗಳು ರಾತ್ರಿ ವೇಳೆ ನಾಲೆಗಳ ಮೇಲೆ ಹೋಗಿ ಎಲ್ಲೆಲ್ಲಿ ಸೋರಿಕೆಯಾಗುತ್ತಿದೆ ಎಂಬುದನ್ನು ಪತ್ತೆಹಚ್ಚಿ, ಕೊನೆ ಭಾಗಕ್ಕೆ ನೀರು ಹೋಗುವಂತೆ ನೋಡಿಕೊಳ್ಳಬೇಕು. ನೂರಾರು ಇಂಜಿನಿಯರ್‌ಗಳು ಇದ್ದಾರೆ. ಏಕೆ ನೀರು ಹರಿಯುತ್ತಿಲ್ಲ ಎಂಬುದನ್ನು ಪತ್ತೆಹಚ್ಚಬೇಕು. ಇನ್ನೊಂದು ವಾರದೊಳಗೆ ಮಳವಳ್ಳಿ ತಾಲ್ಲೂಕಿನ ಕೊನೆ ಭಾಗಕ್ಕೆ ನೀರು ಹರಿಸಿ, ಕೆರೆ-ಕಟ್ಟೆಗಳನ್ನು ತುಂಬಿಸದೇ ಹೋದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್ ಮುಖಂಡರಾದ ಸಾತನೂರು ಜಯರಾಂ, ಕಾಂತರಾಜು, ಶ್ರೀಧರ್, ಸಿದ್ದಾಚಾರಿ, ಅನಿಲ್ ಹಾಡ್ಲಿ, ಶಂಕರ್ ಹಾಜರಿದ್ದರು.