ಜಿಲ್ಲೆ

ಕೆಲವೇ ದಿನದಲ್ಲಿ ರಾಜ್ಯಸರ್ಕಾರ ಪತನ: ಜೆಡಿಎಸ್ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಭವಿಷ್ಯ

ಮಂಡ್ಯ: ನನ್ನ ಪ್ರಕಾರ ರಾಜ್ಯ ಸರ್ಕಾರ ಕೆಲವೇ ದಿನದಲ್ಲಿ ಪತನವಾಗುವುದು ಖಚಿತ ಎಂದು ಜೆಡಿಎಸ್ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಭವಿಷ್ಯ ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ರೈತರ ತಾಳ್ಮೆಯನ್ನ ಕಾಂಗ್ರೆಸ್ ಸರ್ಕಾರ ಕೆಣಕುತ್ತಿದೆ. ರೈತರ ವಿರುದ್ದ ಹೋಗಿರುವ ಸರ್ಕಾರ ದೇಶದಲ್ಲಿ ಉಳಿದಿಲ್ಲ. ಅದೇ ರೀತಿ ರಾಜ್ಯ ಸರ್ಕಾರ ಸರ್ವನಾಶವಾಗುತ್ತದೆ. ಕಾವೇರಿ ಹೋರಾಟದ ಸ್ಥಳದಲ್ಲಿ ನಿಂತು ಹೇಳುತ್ತಿದ್ದೇನೆ. ಬಡವರಿಗೆ ಮಾರಕವಾಗುವಂತಹ ಇಂತಹ ಸರ್ಕಾರ ಉಳಿಯಬಾರದು ಎಂದರು.

ಬಿಜೆಪಿ ಜತೆ ಮೈತ್ರಿಗೆ ದೇವೇಗೌಡರನ್ನ ಹಿಂಸೆ ಕೊಟ್ಟು ಒಪ್ಪಿಸಿದ್ದಾರೆಂಬ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ದೇವೇಗೌಡರು ರಾಜಕೀಯ ಬಂಡಾರ, ದೊಡ್ಡ ವಿಶ್ವವಿದ್ಯಾಲಯ. ಹಿಂಸೆ ತೆಗೆದುಕೊಂಡು ಮೈತ್ರಿ ಒಪ್ಪಿಕೊಳ್ಳುವವರಲ್ಲ. ಯಾವ ಸಮಯಕ್ಕೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಅದನ್ನೇ ತೆಗೆದುಕೊಳ್ಳುತ್ತಾರೆ. ಈ ದೇಶ ಆಳಿದವರಿಗೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿಸಿಕೊಳ್ಳುವವರಲ್ಲ. ಅವರ ನಿರ್ದೇಶನದಲ್ಲೇ ಪಕ್ಷ ಮುನ್ನಡೆಸಲಾಗುತ್ತಿದೆ. ಚಲುವರಾಯಸ್ವಾಮಿ, ಜಮೀರ್ ಸಚಿವರಾಗಬೇಕಿತ್ತಲ್ಲ, ಅದಕ್ಕೆ ಜಾತ್ಯಾತೀತ ಇತ್ತು. ಸಚಿವರಾಗಿದ್ದಕ್ಕೆ ಈಗ ಜೆಡಿಎಸ್‌ನಲ್ಲಿ ಸೆಕ್ಯುಲರ್ ಇಲ್ಲವೆನ್ನುತ್ತಿದ್ದಾರೆ. ಇನ್ನು ಮಂಡ್ಯದಲ್ಲಿ ನಿಖಿಲ್ ಎರಡು ಸೋಲು ತಂದಿರುವುದು ನನಗೆ ನೋವು ತಂದಿದೆ. ಮುಂದಿನ ದಿನದಲ್ಲಿ ಅವರ ಭವಿಷ್ಯ ಉಜ್ವಲವಾಗಿ ಇರಲೆಂದು ಬಯಸುತೇನೆ. ಮಂಡ್ಯದಿಂದ ಯಾರೇ ಸ್ಪರ್ಧೆ ಮಾಡಿದ್ದರೂ ನಮಗೆ ಸ್ವಾಗತ ಇದೆ. ಪಕ್ಷದಿಂದ ಯಾರೇ ನಿಂತುಕೊಂಡರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಪ್ರಮುಖವಾಗಿ ಬಿಜೆಪಿ ಜತೆಗೆ ಜೆಡಿಎಸ್ ವಿಲೀನ ಮಾಡುತ್ತಿಲ್ಲ. ಬದಲಿಗೆ ನಾವು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ. ಚುನಾವಣೆಗೆ ಮಾತ್ರ ನಮ್ಮ ಹೊಂದಾಣಿಕೆ ಸೀಮಿತ. ನಮ್ಮ ಪಕ್ಷದ ಸೆಕ್ಯುಲರ್ ಇದ್ದೇ ಇರುತ್ತದೆ. ಸಿದ್ದಾಂತದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಮುಸ್ಲಿಂ ಬಾಂಧವರು ನಮ್ಮ ಜತೆ ಇರಿ. ನಿಮ್ಮನ್ನ ರಕ್ಷಣೆ ಮಾಡುವುದಕ್ಕೆ ದೇವೇಗೌಡರು, ಕುಮಾರಸ್ವಾಮಿ ಇದ್ದಾರೆ. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದ ತಕ್ಷಣ ಮುಸ್ಲಿಂರಿಗೆ ಶೇ.4ರಷ್ಟು ಮೀಸಲಾತಿ ಕೊಡುತ್ತೇವೆ ಎಂದಿದ್ದರು. ಆದರೆ ಈವರೆಗೂ ಮೀಸಲಾತಿ ಕೊಡಲಿಲ್ಲ. ಕಾಂಗ್ರೆಸ್ ಮುಸ್ಲಿಂ ಪರವಾಗಿ ಇಲ್ಲ. ಚುನಾವಣೆಯ ರಾಜಕಾರಣದಲ್ಲಿ ಎಲ್ಲ ಸಮುದಾಯಬೇಕು ಎಂದರು.