ಜಿಲ್ಲೆ

ಯಾರೇ ಮೈತ್ರಿ ಅಭ್ಯರ್ಥಿಯಾದರೂ ಗೆಲುವು: ಜೆಡಿಎಸ್ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ವಿಶ್ವಾಸ

ಶ್ರೀರಂಗಪಟ್ಟಣ: ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಯಾರೇ ಸ್ಪರ್ಧೆ ಮಾಡಿದರೂ ಪ್ರಚಂಡ ಬಹುಮತದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಹಿನ್ನೆಲೆಯಲ್ಲಿ ಜೆಡಿಎಸ್‌ಗೆ ಮಂಡ್ಯ ಮತ್ತು ಹಾಸನ ಕ್ಷೇತ್ರ ಸಿಗುವುದು ನೂರರಷ್ಟು ಖಚಿತ. ಇದರ ಮೇಲೆ 3 ರಿಂದ 6 ಕ್ಷೇತ್ರ ಜೆಡಿಎಸ್ ಬರುವ ಸಾಧ್ಯತೆ ಇದೆ. ಮಂಡ್ಯ ಜೆಡಿಎಸ್‌ಗೆ ಸಿಗುವುದರಿಂದ ಸಂಸದೆ ಸ್ಪರ್ಧಿಸಲು ಬಿಜೆಪಿಯಿಂದ ಅವಕಾಶ ಸಿಗುವ ಸಾಧ್ಯತೆ ಇಲ್ಲ. ಇನ್ನು ಅವರು ಬಿಜೆಪಿ ಅವರಿಗೆ ಬೆಂಬಲ ನೀಡಿದ್ದರಿಂದ, ಮೈತ್ರಿಗೂ ಬೆಂಬಲ ನೀಡಬೇಕು ಎಂದರು.

ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೊಂಡ ಮೇಲೆ ರಾಷ್ಟ್ರದಲ್ಲಿ ದೊಡ್ಡ ಕ್ರಾಂತಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಸುಭದ್ರ ಸರ್ಕಾರ ಬರುವ ಸಂಕಲ್ಪ 22ರಂದೇ ಆಗಿದೆ. ರಾಮ ಮಂದಿರ ವೀಕ್ಷಣೆಗೆ ದಾಖಲೆ ಸಂಖ್ಯೆಯಲ್ಲಿ ಭಕ್ತರು ಹೋಗುತ್ತಿದ್ದಾರೆ. ಇಂತಹ ಸಂದರ್ಭಗದಲ್ಲಿ ಜಗದೀಶ್ ಶೆಟ್ಟರ್ ಕೂಡ ಮತ್ತೆ ಬಿಜೆಪಿಗೆ ಬಂದಿದ್ದಾರೆ. ಅವರನ್ನು ಹತ್ತಿರದಿಂದ ನೋಡಿದ್ದೇನೆ. ಅವರಿಗೆ ಕಾಂಗ್ರೆಸ್‌ನಲ್ಲಿ ಇರಿಸು ಮುರಿಸು ಆಗಿದೆ. ಆದ್ದರಿಂದ ಮೂಲತಃ ಅವರ ಮನೆಗೆ ಈಗ ವಾಪಸ್ ಆಗಿದ್ದಾರೆ. ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ ಅವರು ಅವರನ್ನು ಸ್ವಾಗತ ಮಾಡಿದ್ದಾರೆ. ಪಕ್ಷಕ್ಕೆ ವಾಪಸ್ ಬಂದಿರುವುದು ದೊಡ್ಡ ವಿಚಾರ. ಇದು ಪ್ರಾರಂಭ ಅಷ್ಟೆ. ಶೆಟ್ಟರ್ ಬಿಜೆಪಿಗೆ ಬಂದಿರುವುದು 100ಕ್ಕೆ 1000 ಭಾಗ ಮೈತ್ರಿಗೆ ಅನುಕೂಲ ಆಗುತ್ತದೆ. ಲೋಕಸಭಾ ಚುನಾವಣೆಗೆ ಶೆಟ್ಟರ್ ತೆಗೆದುಕೊಂಡಿರುವ ನಿರ್ಧಾರ ನಾಂದಿಯಾಗಿದೆ. ಕುಮಾರಸ್ವಾಮಿ ಅವರ ಮಾತಿಗೆ ಬಿಜೆಪಿಯಲ್ಲಿ ಗೌರವ ಸಿಗುತ್ತದೆ. ಜಗದೀಶ್ ಶೆಟ್ಟರ್ ಜತೆ ಎಚ್‌ಡಿಕೆ ಮಾತನಾಡಿದ್ದರು. ಸೋಮಣ್ಣ ಅವರ ಜತೆ ಮಾತಾಡಿ ಸಮಾಧಾನ ಮಾಡಿದ್ದಾರೆ. ಎಲ್ಲ ಸರಿಪಡಿಸುವ ಕೆಲಸವನ್ನು ಮಾಡುತ್ತಾರೆ ಎಂದರು.

ರಾಜ್ಯದ ಜನ ಭ್ರಮನಿರಸರಾಗಿದ್ದಾರೆ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ಸಿಗುತ್ತಿಲ್ಲ. ಸರ್ಕಾರ ರಾಜ್ಯದಲ್ಲಿ ಸಂಪೂರ್ಣ ವಿಫಲವಾಗಿದೆ. ಇದು ಮುಂದಿನ ದಿನಗಳಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಗೆ ಜಯ ತಂದುಕೊಡುತ್ತದೆ. ಇನ್ನೂ ಎರಡು ಮೂರು ತಿಂಗಳಲ್ಲಿ ಹೊಸ ರಾಜಕೀಯ ಇತಿಹಾಸ ರಾಷ್ಟ್ರ ಹಾಗೂ ರಾಜ್ಯದಲ್ಲಿ ಆಗುತ್ತದೆ. ರಾಮಮಂದಿರ ಉದ್ಘಾಟನೆ ಸಾಕಷ್ಟು ಬಲ ತಂದಿದೆ. ಜ.22ರಂದೇ 2024ರ ಲೋಕಸಭಾ ಚುನಾವಣೆ ಮುಗಿದಿದೆ ಎಂದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಗಲು ಸಾಕಷ್ಟು ಜನ ಸಮರ್ಥರಿದ್ದಾರೆ. ಆದರೆ ಕುಮಾರಸ್ವಾಮಿ, ನಿಖಿಲ್ ಬರಬೇಕೆಂದು ನಾವು ನಿರ್ಣಯ ಮಾಡಿದ್ದೇವೆ. ಕಳೆದ ಬಾರಿಯ ಸೋಲು ನೋವು ತಂದಿತ್ತು. ಆ ನೋವು ಹೋಗಲಾಡಿಸಲು ನಿರ್ಣಯ ಮಾಡಿದ್ದೇವೆ. ಅಂತಿಮವಾಗಿ ಪಕ್ಷ ಏನು ತೀರ್ಮಾನ ಮಾಡುತ್ತದೆ ಎನ್ನುವುದನ್ನು ನೋಡೋಣ ಎಂದರು.