ಉಡುಪಿ: ನಾಗಲ್ಯಾಂಡ್ ಮಾಜಿ ರಾಜ್ಯಪಾಲ ಪದ್ಮನಾಭ ಆಚಾರ್ಯ (92) ಶುಕ್ರವಾರ ಬೆಳಗ್ಗೆ ಮುಂಬೈ ಅಂಧೇರಿಯ ಪುತ್ರನ ಮನೆಯಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಪತ್ನಿ ಸವಿತಾ ಆಚಾರ್ಯ, ಮೂವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.
ತೆಂಕಪೇಟೆಯ ಆಚಾರ್ಯ ಮಠದಲ್ಲಿ ಹುಟ್ಟಿ ಬೆಳೆದ ಅವರು, ಉಡುಪಿ ಎಂ.ಜಿ.ಎಂ ಕಾಲೇಜಿನ ಪ್ರಥಮ ಬ್ಯಾಚ್ನ ಬಿಎ ವಿದ್ಯಾರ್ಥಿಯಾಗಿದ್ದರು. ಶಿಕ್ಷಣದ ಬಳಿಕ ಉದ್ಯೋಗ ಅರಸಿ ಮುಂಬಯಿಗೆ ತೆರಳಿದ್ದರು. ಇಲ್ಲಿ ವಿವಿಧ ಕಾಲೇಜುಗಳಲ್ಲಿ ಕ್ಯಾಂಟೀನ್ ಉದ್ಯಮ ಪ್ರಾರಂಭಿಸಿದ್ದರು. ಇದರೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂದ ಸಕ್ರಿಯ ಕಾರ್ಯಕರ್ತರಾಗಿದ್ದ ಅವರು, 1965ರಿಂದಲೂ ಈಶಾನ್ಯ ಭಾರತದಲ್ಲಿ ಸಂದ ಕೆಲಸದಲ್ಲಿ ನಿರತರಾಗಿದ್ದರು. ಇಲ್ಲಿನ ಜನಜೀವನಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಜನಸಂದ ಕಾಲದಿಂದಲೂ ವಾಜಪೇಯಿ&ಅಡ್ವಾಣಿಯವರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದ ಅವರು, ಮಹಾರಾಷ್ಟ್ರ ಬಿಜೆಪಿಯಲ್ಲೂ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
2014ರಲ್ಲಿ ಅಧಿಕಾರಕ್ಕೆ ಬಂದ ಎನ್ ಡಿ ಎ ಸರ್ಕಾರ ಆಚಾರ್ಯರನ್ನು ನಾಗಲ್ಯಾಂಡ್ ರಾಜ್ಯಪಾಲರನ್ನಾಗಿ ನಿಯುಕ್ತಿಗೊಳಿಸಿತ್ತು. 2014 ರಿಂದ 2019ರ ಅವಧಿಯಲ್ಲಿ ತ್ರಿಪುರಾ, ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ರಾಜ್ಯಪಾಲರಾಗಿಯೂ ಪ್ರಭಾರ ಜವಾಬ್ದಾರಿಯನ್ನು ಅವರು ನಿರ್ವಹಿಸಿದ್ದರು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾಗಿ, ಮುಂಬಯಿ ವಿವಿಯ ಸೆನೆಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಉಡುಪಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅವರು ರಾಜ್ಯಪಾಲರಾಗಿದ್ದ ವೇಳೆಯೂ ಅನೇಕ ಬಾರಿ ಹುಟ್ಟೂರಿಗೆ ಭೇಟಿ ನೀಡುತ್ತಿದ್ದರು.