ಮಂಡ್ಯ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯದ ಜನರ ಬೆಂಬಲದೊಂದಿಗೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರು. ಆದರೆ ಬಳಿಕ ಆ ಸಮುದಾಯದ ಅಭಿವೃದ್ಧಿಗೆ ಮೀಸಲಾಗಿದ್ದ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಸರ್ಕಾರದ ಮೇಲೆ ಎಸ್ಸಿ, ಎಸ್ಟಿ ಸಮುದಾಯದ ನಂಬಿಕೆ ಕಳೆದುಕೊಂಡಿದೆ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವಥ್‌ನಾರಾಯಣ ಹೇಳಿದರು.
ತಾಲೂಕಿನ ತೂಬಿನಕೆರೆ ಸಮೀಪ ಮೈಸೂರು ಚಲೋ ಪಾದಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ದಲಿತರ ಭೂಮಿ ಕಬಳಿಕೆ ಮಾಡಿದ್ದಾರೆ. ಇದರಿಂದಾಗಿ ಅವರು ರಾಜೀನಾಮೆ ನೀಡಬೇಕೆನ್ನುವ ಒತಾಯ ಹೆಚ್ಚಾಗುತ್ತಿದೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಜನಾಂದೋಲನ ಸಮಾವೇಶ ಮಾಡುತ್ತಿದ್ದಾರೆ. ಆ ಸಮಾವೇಶ ಸಿದ್ದರಾಮಯ್ಯರಿಗೆ ತಿರುಗು ಬಾಣವಾಗಲಿದೆ. ಜನರು ಸಿದ್ದರಾಮಯ್ಯ ವಿರುದ್ಧವೇ ತಿರುಗಿ ಬೀಳುತ್ತಾರೆ. ಅವರು ರಾಜೀನಾಮೆ ಕೊಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಪ್ರೀತಂಗೌಡ ವಿಚಾರಕ್ಕೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಸಂಘರ್ಷ ವಿಚಾರಕ್ಕೆ ಪ್ರತಿಕ್ರಿಯಿಸಿ, ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳಿವೆ. ಅದರಿಂದ ಮೈತ್ರಿ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಪ್ರೀತಂಗೌಡ ಹಾಗೂ ಜೆಡಿಎಸ್ ನಾಯಕರಲ್ಲಿ ವ್ಯತ್ಯಾಸ ಇರುವುದು ನಿಜ. ಅದನ್ನ ಸರಿಪಡಿಸುವ ಕೆಲಸ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಕಾರ್ಯಕರ್ತರು ಈ ರೀತಿಯ ಸಂಘರ್ಷ ಮಾಡಬಾರದು. ಭ್ರಷ್ಟಾಚಾರದ ವಿರುದ್ಧವಾಗಿ ನಮ್ಮ ಹೋರಾಟ ನಡೆಯುತ್ತಿದೆ. ಸಂಘರ್ಷ ಏನಿದ್ದರೂ ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಇರಬೇಕು. ಫ್ಲೆಕ್ಸ್‌ಗೆ ಬೆಂಕಿ ಹಚ್ಚುವುದರಿಂದ ಯಾವುದೇ ಪ್ರಯೋಜನ ಇಲ್ಲ. ಸಂಘರ್ಷ ಬಿಡುವಂತೆ ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಶಾಸಕ ಅರವಿಂದ್ ಬೆಲ್ಲದ್ ಮಾತನಾಡಿ, ಸಿದ್ದರಾಮಯ್ಯ ಮೊದಲಿನಿಂದಲೂ ಮೊಂಡಾಟ ಮಾಡಿಕೊಂಡೇ ಬಂದವರು. ರಾಜೀನಾಮೆ ನೀಡುವುದಕ್ಕೂ ಮೊಂಡತನ ತೋರುತ್ತಿದ್ದಾರೆ. ಸಿಎಂ ಸಾಕಷ್ಟು ಹಗರಣ ಮಾಡಿದ್ದಾರೆ. ಅಕ್ರಮವಾಗಿ ಮುಡಾದಲ್ಲಿ ನಿವೇಶನ ಪಡೆದುಕೊಂಡಿದ್ದಾರೆ. ನಮ್ಮ ಹೋರಾಟ ಯಶಸ್ವಿಯಾಗಲಿದೆ ಎನ್ನುವ ನಂಬಿಕೆ ಇದೆ. ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು, ರಾಜೀನಾಮೆ ಕೊಟ್ಟೆ ಕೊಡುತ್ತಾರೆ ಎಂದರು.