ಜಿಲ್ಲೆ

ಬೆಂಗಳೂರು ಕೇಂದ್ರ ಪಾಲಿಕೆ ವಿಸ್ತೀರ್ಣ ಹಿಗ್ಗಿಸಲು ಮಾಜಿ ಕಾರ್ಪೊರೇಟರ್‌ಗಳ ಆಗ್ರಹ

ಆರ್​​.ತುಳಸಿಕುಮಾರ್​​

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರದೇಶದ (ಜಿಬಿಎ) ಹಾಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ ವಿಂಗಡಿಸಿರುವ ಐದು ಪಾಲಿಕೆಗಳ ಪೈಕಿ ‘ಬೆಂಗಳೂರು ಸೆಂಟ್ರಲ್ ಕಾರ್ಪೊರೇಷನ್’ ವಿಸ್ತೀರ್ಣವನ್ನು ಹೆಚ್ಚಿಸಿ ಇತರ ಪಾಲಿಕೆಗಳೊಂದಿಗೆ ಸ್ವಾಮ್ಯತೆ ಹೊಂದಲು ಆದ್ಯತೆ ನೀಡಬೇಕು ಎಂದು ಮಾಜಿ ಕಾರ್ಪೊರೇಟರ್‌ಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಇತ್ತೀಚಿಗೆ ಹೊರಡಿಸಿರುವ ಕರಡು ಅಧಿಸೂಚನೆಯಲ್ಲಿ 5 ಪಾಲಿಕೆಗಳ ಗಡಿ, ಜನಸಂಖ್ಯೆ, ಆದಾಯ ಹಾಗೂ ಇತರ ವಿಷಯಗಳಲ್ಲಿ ಸಮಾನತೆ ಕಾಪಾಡಿಕೊಳ್ಳಲಾಗಿದೆ ಎಂಬುದಾಗಿ ಸರ್ಕಾರ ಪ್ರತಿಪಾದಿಸಿದೆ. ಆದರೆ, ಮಹಾನಗರದ ವ್ಯಾಪಾರ ಕೇಂದ್ರ ಪ್ರದೇಶಗಳನ್ನು ಮಾತ್ರ ಗಮನಹರಿಸಿ ಸೆಂಟ್ರಲ್ ಪಾಲಿಕೆ ರಚಿಸಲಾಗಿದೆ. ಆದರೆ, ಕೇಂದ್ರ ಪಾಲಿಕೆಯು ಇತರ ಕಾರ್ಪೊರೇಷನ್‌ಗಿಂತ ಹಲವು ವಿಷಯಗಳಲ್ಲಿ ಭಿನ್ನತೆ ಹೊಂದಿರುವುದರಿಂ ಭವಿಷ್ಯದಲ್ಲಿ ಸಮಸ್ಯೆ ಉದ್ಭವವಾಗುವ ಸಾಧ್ಯತೆ ಇದೆ. ಇದನ್ನು ಗ್ರಹಿಸಿ ಈಗಲೇ ಪರಿಹಾರ ಕಂಡುಕೊಳ್ಳಬೇಕು ಎಂದು ಮಾಜಿ ಪುರಪಿತೃಗಳು ಸಲಹೆ ನೀಡಿದ್ದಾರೆ.

ಕೇಂದ್ರ ಪಾಲಿಕೆಯ ವಿಸ್ತೀರ್ಣವನ್ನು 78 ಚದರ ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ. ಇದು ಇತರ ನಾಲ್ಕು ಪಾಲಿಕೆಗಳ ವಿಸ್ತೀರ್ಣಕ್ಕಿಂತ ಕಡಿಮೆ ಇದೆ. ಚಿಕ್ಕಪೇಟೆ, ಗಾಂಧಿನಗರ, ಶಿವಾಜಿನಗರ, ಶಾಂತಿನಗರ, ಸಿ.ವಿ.ರಾಮನ್‌ನಗರ ಹಾಗೂ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಅಡಕಗೊಳಿಸಿದ್ದು, ಈ ಆರೂ ಕ್ಷೇತ್ರಗಳಲ್ಲಿ ಒಟ್ಟು 25 ಲಕ್ಷ ಜನಸಂಖ್ಯೆ (2023ರಂತೆ) ಇರುವಂತೆ ಹೊಸ ಪಾಲಿಕೆಯನ್ನು ರಚಿಸಲಾಗಿದೆ. ಜನಸಂಖ್ಯೆ ಇರುವುದರಿಂದ 70ಕ್ಕಿಂತ ಕಡಿಮೆ ವಾರ್ಡ್‌ಗಳನ್ನಷ್ಟೇ ವಿಂಗಡಿಸಬಹುದಾಗಿದ್ದು, ಈ ಸಂಖ್ಯೆ ಇತರ ಪಾಲಿಕೆಗಳಿಗಿಂತಿ ಕಡಿಮೆ ಆಗಲಿದೆ. ಆಗ ಆಡಳಿತ ನಡೆಸಲು ಅನುಕೂಲವಿದ್ದರೂ, ಪ್ರಾತಿನಿಧ್ಯ ವಿಚಾರದಲ್ಲಿ ರಾಜಕೀಯ ಪಕ್ಷಗಳಿಂದ ತಗಾದೆ ಏಳಲಿದೆ. ಜತೆಗೆ ಕಾರ್ಪೊರೇಟರ್‌ಗಳಾಗಲು ಹೆಚ್ಚಿನ ಅವಕಾಶ ಕೈತಪ್ಪಿ ಇತರ ಪಾಲಿಕೆಗಳತ್ತ ವಲಸೆ ಹೋಗಬೇಕಾಗುತ್ತದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಬಿಟಿಎಂ ಲೇಔಟ್ ಸೇರ್ಪಡೆಗೊಳಿಸಲು ಒತ್ತಾಯ:

ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ 6 ವಿಧಾನಸಭಾ ಕ್ಷೇತ್ರಗಳನ್ನು ಅಡಕಗೊಳಿಸಲಾಗಿದೆ. ಇವುಗಳ ಜತೆಗೆ ಬಿಟಿಎಂ ಲೇಔಟ್ ಕ್ಷೇತ್ರವನ್ನು ಸೇರಿಸಿಕೊಂಡಲ್ಲಿ ಜನಸಂಖ್ಯೆ, ವಿಸ್ತೀರ್ಣ ಹಾಗೂ ಆದಾಯದ ಮೂಲ ಹೆಚ್ಚಲಿದೆ. ಹೀಗೆ ಮಾಡುವುದರಿಂದ ಇತರ ಪಾಲಿಕೆಗಳೊಂದಿಗೆ ಸೆಂಟ್ರಲ್ ಕಾರ್ಪೊರೇಷನ್ 100 ಚದರ ಕಿ.ಮೀ. ದಾಟಲಿದೆ. ಈ ಸಲಹೆಯನ್ನು ಎಲ್ಲ ರಾಜಕಿಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಮತ ವ್ಯಕ್ತಪಡಿಸುವುದರಿಂದ ಸರ್ಕಾರ ಕೇಂದ್ರ ಪಾಲಿಕೆ ವಿಚಾರದಲ್ಲಿ ಆಕ್ಷೇಪಣೆ ಪರಾಮರ್ಶೆ ವೇಳೆ ಪರಿಗಣಿಸಬೇಕು ಎಂಬ ಕೂಗೆದ್ದಿದೆ.

ಮೈನಾರಿಟಿ ‘ಕೈ’ವಶದ ಆತಂಕ?:

ಕೇಂದ್ರ ಪಾಲಿಕೆಯ ಆರೂ ಕ್ಷೇತ್ರಗಳಲ್ಲಿ ಅಂದಾಜು 25 ಲಕ್ಷ ಜನಸಂಖ್ಯೆ ಇದ್ದರೂ, ಹೆಚ್ಚಿನ ಮಂದಿ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ್ದಾರೆ. ಈ ಮಾಹಿತಿ ಆಧರಿಸಿಯೇ ಸರ್ಕಾರ ಸೆಂಟ್ರಲ್ ಕಾರ್ಪೊರೇಷನ್ ವಿಸ್ತೀರ್ಣವನ್ನು ಬೇಕೆಂದೇ ಕಡಿಮೆಗೊಳಿಸಲಾಗಿದೆ. ಇತರ ಪಾಲಿಕೆಗಳ ವಿಂಗಡಣೆಗೆ ಅನುಸರಿಸಿರುವ ಅಂಶಗಳನ್ನು ಸೆಂಟ್ರಲ್ ಕಾರ್ಪೊರೇಷನ್‌ಗೆ ಭಿನ್ನವಾದ ಮಾನದಂಡವನ್ನು ಪರಿಗಣಿಸಲಾಗಿದೆ. ಇದು ಬೆಂಗಳೂರಿನ ಭಾಷಾ ಬಾಂಧವ್ಯ ಹಾಗೂ ಅಸ್ಮಿತೆಗೆ ಧಕ್ಕೆ ತರುವ ಅಪಾಯವೂ ಇದೆ ಎಂದು ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಇದಕ್ಕೆ ಕನ್ನಡ ಪರ ಸಂಘಟನೆಗಳು ಕೂಡ ದನಿಗೂಡಿಸಿದೆ. ಭವಿಷ್ಯದಲ್ಲಿ ಬೆಂಗಳೂರು ನಗರವು ತನ್ನ ಮೂಲ ಸ್ವರೂಪವನ್ನು ಕಾಯ್ದುಕೊಳ್ಳಬೇಕಿದ್ದಲ್ಲಿ ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ವಿಂಗಡಣೆ ಕಾರ್ಯವನ್ನು ನಡೆಸುವುದು ಯುಕ್ತ ಎಂಬ ಸಲಹೆ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಕೇಂದ್ರ ಪಾಲಿಕೆಯ ಪ್ರಮುಖಾಂಶ:

* ವಿಸ್ತೀರ್ಣ - 78 ಚದರ ಕಿ.ಮೀ.

* ಜನಸಂಖ್ಯೆ -25 ಲಕ್ಷ (2023ರಂತೆ)

* ಜನಸಾಂದ್ರತೆ - 32 ಸಾವಿರ

* ಉದ್ದೇಶಿತ ವಾರ್ಡ್‌ಗಳು - 70

* ಅಸೆಂಬ್ಲಿ ಕ್ಷೇತ್ರ - ಚಾಮರಾಜಪೇಟೆ, ಚಿಕ್ಕಪೇಟೆ, ಶಿವಾಜಿನಗರ, ಗಾಂಧಿನಗರ, ಶಾಂತಿನಗರ, ಸಿ.ವಿ.ರಾಮನ್‌ನಗರ.

ಬೃಹತ್ ವಿಸ್ತೀರ್ಣ ಹೊಂದಿರುವ ಬಿಬಿಎಂಪಿ ಆಡಳಿತ ನಡೆಸುವುದು ಕಷ್ಟವೆಂದು ಎಲ್ಲರಿಗೂ ತಿಳಿದಿದೆ. ಇದನ್ನೇ ಮಾನದಂಡವಾಗಿರಿಸಿಕೊಂಡು 5 ಪಾಲಿಕೆಗಳನ್ನಾಗಿ ಮಾಡಿರುವುದು ತಪ್ಪು. ಒಂದೇ ಪಾಲಿಕೆ ಅಡಿಯಲ್ಲಿ ಹೆಚ್ಚಿನ ವಲಯಗಳನ್ನು ರಚಿಸಿ ಆಡಳಿತವನ್ನು ವಿಕೇಂದ್ರೀಕರಣಗೊಳಿಸಬೇಕಿತ್ತು. ಆದರೆ, ಚುನಾವಣೆ ಗೆಲ್ಲಲು ಮೈನಾರಿಟಿ ಜನರಿರುವ ಪ್ರದೇಶವನ್ನು ಒಟ್ಟುಗೂಡಿಸಿ ಕೇಂದ್ರ ಪಾಲಿಕೆ ರಚಿಸಿರುವುದು ಬೆಂಗಳೂರಿನ ಬೆಳವಣಿಗೆಗೆ ಅಡ್ಡಿಯಾಗಲಿದೆ.

- ಮುನೀಂದ್ರ ಕುಮಾರ್, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ

ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಬೃಹತ್ ನಗರ. ಇದನ್ನು ಗಮನಿಸಿಕೊಂಡು ಮಹಾನಗರವನ್ನು ಜಾಗತಿಕ ಮಟ್ಟಕ್ಕೆ ಏರಿಸಲು ಏಕ ಪಾಲಿಕೆ ವ್ಯವಸ್ಥೆ ಅಡಿಯಲ್ಲಿ ಆಡಳಿತ ನಡೆಸುವುದು ಸೂಕ್ತ. ರಾಜಧಾನಿಯಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲೇ ಸರ್ಕಾರ ತನ್ನ ಅಲ್ಪಸಂಖ್ಯಾತರ ಪರವಾದ ನೀತಿಯನ್ನು ಅನ್ವಯಿಸಿ ಸೆಂಟ್ರಲ್ ಕಾರ್ಪೊರೇಷನ್ ರಚಿಸಿರುವುದನ್ನು ಪುನರ್ ಪರಿಶೀಲಿಸಬೇಕು.

- ಸಣ್ಣೀರಪ್ಪ, ಕರವೇ ಸಂಘಟನೆಯ ವಕ್ತಾರ