ಕ್ರೀಡೆ, ಶಿಕ್ಷಣ ಸೇರಿದಂತೆ ಸಮಾಜದ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ ಎಂದು ನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಹೇಳಿದರು.
ನಿವೇದಿತ ನಗರದ ಸುಬ್ಬರಾವ್ ಉದ್ಯಾನದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ ಕ್ರೀಡಾ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ನಮ್ಮ ಮೈಸೂರಿನಲ್ಲಿ ಅನೇಕ ಸಂಘ-ಸಂಸ್ಥೆಗಳು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ. ಎಲ್ಲವನ್ನೂ ಸರ್ಕಾರದಿಂದ ನಿರೀಕ್ಷಿಸುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರಿಗೆ ಸ್ಫೂರ್ತಿ ತುಂಬಬೇಕು ಎಂದರು.
ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳ ಕಡೆಯೂ ಗಮನ ಹರಿಸಬೇಕು. ಕ್ರೀಡೆಯು ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗವಾದಾಗ ಮಾತ್ರ ಪರಿಪೂರ್ಣ ವಿದ್ಯಾರ್ಥಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿಗಳು ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಭಾಗಿಯಾಗಬೇಕು. ಪಾಲಕರು ಕೂಡ ಅವರ ಸಾಧನೆಗೆ ಸಹಕರಿಸಬೇಕು ಎಂದರು.
ಹಿರಿಯ ಅಥ್ಲೀಟ್ ಬಸವರಾಜ್ ಮಾತನಾಡಿ, ಇಂದು ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಇಂಜಿನಿಯರ್, ವೈದ್ಯ, ಐಎಎಸ್, ಕೆಎಎಸ್ ಆಗಲಿ ಎಂದು ಆಸೆ ಪಡುತ್ತಿದ್ದಾರೆ. ಆದರೆ ತಮ್ಮ ಮಕ್ಕಳು ಉತ್ತಮ ಕ್ರೀಡಾಪಟುವಾಗಲಿ ಎಂದು ಯೋಚಿಸುವವರು ಕಡಿಮೆ. ಚೈನಾ ಸೇರಿಸಂತೆ ಬಹುತೇಕ ದೇಶದಲ್ಲಿ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ. ಅಲ್ಲಿನ ಪಾಲಕರು ಕೂಡ ತಮ್ಮ ಮಕ್ಕಳು ಕ್ರೀಡಾಪಟುವಾಗಲಿ ಎಂದು ಪ್ರೋತ್ಸಾಹಿಸುತ್ತಿದ್ದಾರೆ. ಆದ್ದರಿಂದ ಆ ದೇಶಗಳು ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕ ಗಳಿಸುತ್ತಿವೆ. ನಮ್ಮ ದೇಶದಲ್ಲಿನ ಪಾಲಕರ ಮನೋಭಾವ ಬದಲಾಗಬೇಕು. ಕ್ರೀಡೆಗೂ ಹೆಚ್ಚಿನ ಒತ್ತು ನೀಡಲು ಪಾಲಕರು ಮುಂದಾಗಬೇಕು ಎಂದರು.
ಸುಬ್ಬರಾವ್ ಪಾರ್ಕ್ ದೊಡ್ಡ ಮಟ್ಟದಲ್ಲಿ ಬೆಳೆಯಲು ಜೆ.ಎಸ್.ಜಗದೀಶ್ ಅವರೇ ಕಾರಣ. ಇದು ಹಿರಿಯರು, ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ಪಾರ್ಕ್‌ನಲ್ಲಿ ವಾಕ್ ಮಾಡುವ ಮೂಲಕ ಅನುಕೂಲ ಪಡೆಯುತ್ತಿದ್ದಾರೆ ಎಂದರು.
ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಪ್ರೊ.ನಾಗರಾಜು ಮಾತನಾಡಿದರು. ಇದೇ ವೇಳೆ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಪದಕ ಗಳಿಸಿರುವ ನಿಶ್ಚಿತ ಪಿ.ಗೌಡ, ಎಚ್.ಸಹಾ, ಆರ್.ಮಾಧುರ್ಯ ಅವರನ್ನು ಸನ್ಮಾನಿಸಲಾಯಿತು.
ಅಥ್ಲೆಟಿಕ್ಸ್ ತರಬೇತುದಾರ ಪುನೀತ್, ಬಿಜೆಪಿ ಯುವ ಮುಖಂಡ ಅರ್ಜುನ್, ಮುಖಂಡರಾದ ಸತ್ಯಾನಂದ ವಿಟ್ಟು, ಭಾಗ್ಯಶ್ರೀ ಭಟ್, ರಾಕೇಶ್, ದಿನೇಶ್, ಲೋಹಿತ್ ರಾವ್, ಶ್ರೀಕಾಂತ್, ಶ್ರೀನಿವಾಸ್, ಶ್ರೇಯಸ್, ರವಿ, ರಮೇಶ್ ಇತರರಿದ್ದರು.