ಜಿಲ್ಲೆ

ಮುಡಾದ ಹಿಂದಿನ ಆಯುಕ್ತ ದಿನೇಶ್‌ಕುಮಾರ್ ಅಮಾನತು

ಮಂಜುನಾಥ ತಿಮ್ಮಯ್ಯ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.


ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತಿನಲ್ಲಿರಿಸಿದ್ದು, ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಉಮಾದೇವಿ ಆದೇಶದಲ್ಲಿ ತಿಳಿಸಿದ್ದಾರೆ.


ಕಾರಣ ಏನು?: ಸಭೆಗೆ ಮಂಡಿಸಲಾದ ಬಹುತೇಕ ವಿಷಯಗಳಲ್ಲಿ ಸ್ಪಷ್ಟ ಅಭಿಪ್ರಾಯವನ್ನು ಟಿಪ್ಪಣಿಯಲ್ಲಿ ದಾಖಲಿಸಿಲ್ಲ. ಸರ್ಕಾರದ ನಿರ್ದೇಶನ ಪಾಲನೆ ಮಾಡಿಲ್ಲ. ವಸತಿ ಯೋಜನೆಗಳಿಗೆ ಸರ್ಕಾರದಿಂದ ಅನುಮೋದನೆ ಪಡೆದಿಲ್ಲ. ಬಡಾವಣೆಗಳಲ್ಲಿ ಉದ್ಯಾನ(ಕನಿಷ್ಠ ಶೇ.15), ನಾಗರಿ ಸೌಲಭ್ಯ ನಿವೇಶನ(ಕನಿಷ್ಠ ಶೇ.10) ಜಾಗಗಳಿಗೆ ಕಾಯ್ದಿರಿಸಿದಂತಹ ಪ್ರದೇಶ ಭೂಸ್ವಾಧೀನದಿಂದ ಕೈಬಿಡಲಾಗಿದೆ. ಇದು ತಾಳೆಯಾಗುವುದೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡಲು ದೃಢೀಕೃತ ವಿನ್ಯಾಸ ನಕ್ಷೆ ಲಭ್ಯ ಇಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.


ಬದಲಿ ನಿವೇಶನ ಮಂಜೂರಾತಿಗಾಗಿ ನಿಯಮಬಾಹಿರವಾಗಿ ಶಿಫಾರಸು ಮಾಡಲಾಗಿದೆ. ಬಡಾವಣೆ ನಿರ್ಮಿಸಿರುವ ಕುರಿತು ಸಮಗ್ರ ಮಾಹಿತಿ ಮಂಡಿಸುವಂತೆ ಸೂಚಿಸಿದ್ದಾಗ್ಯೂ ಅದರಂತೆ ನಡೆದುಕೊಂಡಿಲ್ಲ. ಅನುಮೋದಿತ ಯೋಜನೆಯ ವ್ಯಾಪ್ತಿ ಮೀರಿ ನಿರ್ಮಿಸಿದ ಬಡಾವಣೆಯ ಸಮಗ್ರ ಮಾಹಿತಿಯನ್ನೂ ಪರಿಶೀಲಿಸಲು ಸಭೆಗೆ ಮಂಡಿಸಿಲ್ಲ ಎಂದೂ ಸ್ಪಷ್ಟ ತಿಳಿಸಲಾಗಿದೆ.


ನಿವೇಶನ ಹಂಚಿಕೆಯಲ್ಲಿ ಪರಿಶೀಲಿಸದೆ ನಿಯಮಬಾಹಿರವಾದ ಕ್ರಮ ಕೈಗೊಂಡಿರುವುದು, ಈ ಮೂಲಕ ಕಾನೂನಾತ್ಮಕ ಗೊಂದಲಗಳಿಗೆ ಅವಕಾಶ ಕಲ್ಪಿಸಲಾಗಿದೆ. ನಿಯಮ ಪ್ರಕಾರ ಭೂಸ್ವಾಧೀನಗೊಂಡಿರುವ ಜಮೀನುಗಳು, ರಚಿಸಲಾದ ನಿವೇಶನಗಳು, ಮೂಲೆ ನಿವೇಶನೆಗಳು, ಬಿಡಿ ನಿವೇಶನಗಳು, ತುಂಡು ಜಾಗ, ಬಾಕಿ ಉಳಿದ ನಿವೇಶನಗಳ ವಿವರಗಳನ್ನು ನಕ್ಷೆಯೊಂದಿಗೆ ಕಾಲೋಚಿತವಾಗಿ ಸಿದ್ಧಪಡಿಸಿಲ್ಲ.


ಪ್ರಾಧಿಕಾರದ ವಸತಿ ಯೋಜನೆಗಳಲ್ಲಿ ನಿವೇಶನ ರಚಿಸಿದ್ದು, ನಂತರ ನಿವೇಶನಗಳನ್ನು ವಹಿಯಲ್ಲಿ ನಮೂದಿಸದೆ ಮಂಜೂರಾತಿಗಾಗಿ ಆದೇಶಿಸಲಾಗಿದೆ. ಇದು ನಿಯಮಬಾಹಿರವಾಗಿದೆ. ಹೀಗಾಗಿ, ತಾಂತ್ರಿಕ ಸಮಿತಿಯ ವರದಿಯನ್ನು ಪರಿಶೀಲಿಸಿದೆ. ಇವರು ಗಂಭೀರ ಸ್ವರೂಪದ ಕರ್ತವ್ಯಲೋಪ ಎಸಗಿರುವ ಆರೋಪಗಳು ಮನವರಿಕೆಯಾಗಿದೆ. ಅಧಿಕಾರಿಯು ಸರ್ಕಾರಿ ಸೇವೆಯಲ್ಲಿ ಮುಂದುವರಿದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.


ಅಧಿಕಾರಿ ತಲೆದಂಡ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆಯಲ್ಲಿ ಅಕ್ರಮ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ಬದಲಿ ನಿವೇಶನ ಹೆಸರಿನಲ್ಲಿ ವಿಜಯನಗರದಲ್ಲಿ 14 ನಿವೇಶನ ಪಡೆದಿರುವುದು ವಿವಾದಕ್ಕೆ ಕಾರಣವಾಗಿದೆ.

ಬಿಜೆಪಿ-ಜೆಡಿಎಸ್ ಪಕ್ಷಗಳು ಸದನದಲ್ಲಿ ಸಿಎಂ ವಿರುದ್ಧ ಹೋರಾಟ ನಡೆಸಿ ಅಹೋರಾತ್ರಿ ಧರಣಿ ಸಹ ನಡೆಸಿದ್ದವು. ಇದಕ್ಕೆ ಜಗ್ಗದಿದ್ದಾಗ ಬೆಂಗಳೂರು-ಮೈಸೂರಿನವರೆಗೆ ಪಾದಯಾತ್ರೆ ಮಾಡಿ ಸಿಎಂ ರಾಜೀನಾಮೆಗೆ ಆಗ್ರಹಿಸಿದ್ದವು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಜನಾಂದೋಲನಾ ಕಾರ್ಯಕ್ರಮವನ್ನು ವಿವಿಧೆಡೆ ಆಯೋಜಿಸಿತ್ತು.

ಬಳಿಕವೂ ಮುಡಾ ಸದ್ದು ಕಡಿಮೆ ಆಗಿರಲಿಲ್ಲ. ನಿತ್ಯ ಒಂದಿಲ್ಲವೊಂದು ಆರೋಪ-ಪ್ರತ್ಯಾರೋಪಗಳು ರಿಂಗಣಿಸುತ್ತಿವೆ. ಈ ನಡುವೆ ವಿವಾದಿತ ಕೆಎಎಸ್ ಅಧಿಕಾರಿ ದಿನೇಶ್‌ಕುಮಾರ್ ಅವರ ತಲೆದಂಡವಾಗಿದೆ.