ಜಿಲ್ಲೆ

ದುಡ್ಡು ಕೊಟ್ಟಿದ್ದೇವೆಂದು ಯಾವ ಅಧಿಕಾರಿಯೂ ಹೇಳಲ್ಲ: ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಮಾಜಿ ಸಿಎಂ ಎಚ್‌ಡಿಕೆ ವಾಗ್ದಾಳಿ

ಮಂಡ್ಯ: ಎಡಿ, ಜೆಡಿಗಳ ಬಳಿ ಕ್ಯಾಟಗರಿ ವೈಸ್ ರೇಟ್ ಫಿಕ್ಸ್ ಆಗಿದೆ. ಯಾವ ಅಧಿಕಾರಗಳು ಧೈರ್ಯವಾಗಿ ಹೇಳಲು ಸಾಧ್ಯವಿಲ್ಲ. ವರ್ಗಾವಣೆ ಡಿಮಾಂಡ್ ಇದೆ, ದುಡ್ಡು ಕೊಟ್ಟಿದ್ದೀವಿ ಎಂದು ಯಾವ ಅಧಿಕಾರಿ ಹೇಳಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಸಚಿವರ ವಿರುದ್ಧ ಕೇಳಿ ಬಂದ ಪ್ರಕರಣದ ಹಿನ್ನೆಲೆ ಏನು?. ನನ್ನ ಮೇಲೆ ಏಕೆ ಇವರು ಬೆಟ್ಟು ತೋರಿಸುತ್ತಾರೆ?. ರಾಜ್ಯಪಾಲರಿಗೆ ಪತ್ರ ಬರೆದವರು ಕೆ.ಆರ್.ನಗರದ ಅಧಿಕಾರಿಗಳು. ಪತ್ರ ಅಸಲಿಯೋ, ನಕಲಿಯೋ ಚರ್ಚೆ ಆಗುತ್ತಿದೆ. ಆದರೆ ಪತ್ರದಲ್ಲಿ ಇರುವುದು ಸತ್ಯವೋ, ಇಲ್ಲವೋ ಎಂಬುದು ತನಿಖೆ ಆಗುತ್ತಿಲ್ಲ. ಏಕೆ ಈ ವಿಷಯ ಬಂತು, ಸುಮ್ಮನೆ ಈ ವಿಷಯ ಬರುತ್ತಾ ಎಂದು ಪ್ರಶ್ನಿಸಿದರು.

ಅದ್ಯಾವುದೋ ಪತ್ರಿಕೆ ಹಿಡಿದು ಕುಮಾರಸ್ವಾಮಿ ಕಾಲದಲ್ಲಿ ರೇಟ್ ಫಿಕ್ಸ್ ಆಗಿತ್ತು ಎನ್ನುತ್ತಾರೆ. ನನಗೆ ಗಾಬರಿಯಾಯಿತು. ಆ ಪತ್ರಿಕೆ ಕಟಿಂಗ್ ನೋಡಿದರೆ ಅದರಲ್ಲಿ ಈ ಮಹಾನುಭಾವರದ್ದೆ ಇದೆ. 600 ಕೋಟಿ ರೂ ಮಾಗಡಿಯಲ್ಲಿ ಅಕ್ರಮ ಕಾಮಗಾರಿಗೆ ಸಂಬಂಧಪಟ್ಟ ವಿಷಯ ಅದು. ಹಿಂದೆ ಬಿಜೆಪಿ, ಕಾಂಗ್ರೆಸ್ ಸರ್ಕಾರದಲ್ಲಿ ಏನು ನಡೆಯುತ್ತಿತ್ತು ಆ ವಿಷಯ ಅದರಲ್ಲಿತ್ತು ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ನನ್ನ ಮೇಲೆ ಶ್ರೀರಂಗಪಟ್ಟಣ ಶಾಸಕ ಅಪಾದನೆ ಮಾಡುತ್ತಾನೆ. ಅವನ ಮಾತು ಕೇಳಿ ನನಗೆ ಆಶ್ಚರ್ಯ. ಆ ಕುಟುಂಬಕ್ಕೆ ದೇವೇಗೌಡರು ಕುಟುಂಬ ಬೆಂಬಲವಾಗಿ ನಿಂತಿತ್ತು. ಈ ಗಿರಾಕಿ ಎಂಎಲ್‌ಎ ಆದಾಗ ಬೆಳಗಿನ ಜಾವ 4.30ಕ್ಕೆ ಹಳ್ಳಿ ಹಳ್ಳಿ ಸುತ್ತಿ ಪ್ರಚಾರ ಮಾಡಿದ್ದೇನೆ. ಅಂಬರೀಷ್ ವಿರುದ್ಧ ಈತನನ್ನ ಗೆಲ್ಲಿಸಿಕೊಂಡು ಬಂದಿದ್ದೇನೆ. ಈಗ ಅವನು ನನಗೆ ಉಪದೇಶ ಮಾಡುತ್ತಾನೆ, ತಾಳ್ಮೆ ಹೇಳುತ್ತಾನೆ. ಇವರ ಪಾಪದ ಕೊಡ ತುಂಬಿದೆ, ಇದೆಲ್ಲ ಶಾಶ್ವತ ಅಲ್ಲ ಎಂದರು,

ಮಂಡ್ಯ ಜಿಲ್ಲೆ ರಾಜಕಾರಣ ವಿಭಿನ್ನ. ದೇವೇಗೌಡರು ಸಿಎಂ ಆಗುತ್ತಾರೆಂದು 8 ಸ್ಥಾನ ಗೆಲ್ಲಿಸಿದ್ದರು. ಎಸ್.ಎಂ.ಕೃಷ್ಣ ಸಿಎಂ ಆಗುತ್ತಾರೆಂದು ಅವರಿಗೂ 8 ಸ್ಥಾನ ಗೆಲ್ಲಿಸಿದ್ದರು. ಅದು ಜಿಲ್ಲೆಯ ಜನರ ಸ್ವಾಭಿಮಾನ, ಅಭಿಮಾನ. ನಮ್ಮ ಸ್ವಯಂಕೃತ ಅಪರಾಧಗಳಿಂದ ಸೋತಿದ್ದೇವೆ. ಆದರೆ ಜನ ನಮ್ಮನ್ನ ಕೈಬಿಟ್ಟಿಲ್ಲ. ಜೆಡಿಎಸ್ ಮುಗಿದಿಲ್ಲ, ಬದುಕಿದೆ. ಆದ್ದರಿಂದ ದುರಹಂಕಾರದ ಮಾತು ಬಿಟ್ಟು ಪ್ರಾಮಾಣಿಕವಾಗಿ ನಡೆದುಕೊಳ್ಳಿ. ನಿಮ್ಮ ಕಾಲದಲ್ಲಿ ವರ್ಗಾವಣೆ ಆಗಿಲ್ವಾ ಎನ್ನುತ್ತಾರೆ. ಈಗೀನ ವರ್ಗಾವಣೆಗೂ, ನನ್ನ ಕಾಲದ ವರ್ಗಾವಣೆಗೂ ವ್ಯತ್ಯಾಸ ಇದೆ. 2018ರಲ್ಲಿ ನಾನು ಸಿಎಂ ಆಗಿದ್ದಾಗ ಬಿಡಿಎ ಕಮಿಷನರ್ ಆಗಲು 15 ಕೋಟಿ ರೂ ಕೊಡಲು ಬಂದರು. ಇಷ್ಟು ಹಣ ಅಧಿಕಾರಿ ಬಿಡಿಎಗೆ ಏನು ಕೆಲಸ ಮಾಡಲು ಸಾಧ್ಯ ಬೇಡ ಎಂದಿದ್ದೆ. ನನ್ನ ಸರ್ಕಾರದ ತೆಗೆದು ಬಿಜೆಪಿ ಬಂದ ಬಳಿಕ ಅದೇ ಅಧಿಕಾರಿಗೆ ಅಧಿಕಾರ ಕೊಟ್ಟರು. ಇವತ್ತು ಯಾವದಕ್ಕೂ ನಾನು ಅಂಜುವುದಿಲ್ಲ. ಇದಕ್ಕಿಂತ ಕಷ್ಟದ ದಿನಗಳನ್ನು ನೋಡಿದ್ದೇನೆ. ಮೊದಲು ರೈತರ ಕಷ್ಟಗಳನ್ನು ಪರಿಹರಿಸಿ. 134 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಎಂದಿದ್ದೀರಿ. ರೈತರಿಗೆ ಬರ ಪರಿಹಾರ ಸಿಗಲ್ಲ. ಬರದ ಹೆಸರಲ್ಲೂ ದುಡ್ಡು ಹೊಡೆಯುವ ಕಾರ್ಯಕ್ರಮ ಆರಂಭಗುತ್ತದೆ. ಅದು ಆಗದ ರೀತಿ ಎಚ್ಚರಿಕೆ ವಹಿಸಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.