ಜಿಲ್ಲೆ

ಎರಡು ಕಡೆಯಿಂದ ಹೊರಟ ಕಾಂಗ್ರೆಸ್ ಬಸ್ ಯಾತ್ರೆ ಮಧ್ಯದಲ್ಲೇ ಪಂಕ್ಚರ್​: ಮಾಜಿ ಸಿಎಂ ಬಿಎಸ್​ವೈ ಹೀಗಂದಿದ್ದು ಯಾಕೆ?

ಬೆಂಗಳೂರು: ಪ್ರತಿಪಕ್ಷ ಕಾಂಗ್ರೆಸ್​​ನಲ್ಲಿ ಅಸಮಾಧಾನ, ಅತೃಪ್ತಿ ತುಂಬಿ ತುಳುಕುತ್ತಿದೆ. ಆ ಪಕ್ಷದ ಮುಖಂಡರಿಬ್ಬರು ನಾನೇ ಮುಖ್ಯಮಂತ್ರಿ ಎಂದು ಪೈಪೋಟಿಗೆ ಇಳಿದಿದ್ದಾರೆ. ಹೀಗಾಗಿ ಎರಡು ಕಡೆಯಿಂದ ಹೊರಟಿರುವ ಕಾಂಗ್ರೆಸ್ ಬಸ್ ಯಾತ್ರೆ ಮಧ್ಯದಲ್ಲೇ ಪಂಕ್ಚರ್ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಟೀಕಿಸಿದರು.

ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ರಾಜ್ಯ ನಾಯಕರು ನಾಲ್ಕು ತಂಡಗಳಾಗಿ ಇಷ್ಟರಲ್ಲೇ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ವಿಶ್ವ ಮೆಚ್ಚಿದ ನಾಯಕ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಾರ್ಗದರ್ಶನ, ನಿರಂತರ ರಾಜ್ಯ ಭೇಟಿಯನ್ನು ಸದ್ಬಳಕೆ ಮಾಡಿಕೊಂಡು ನಿಚ್ಚಳ ಬಹುಮತದೊಂದಿಗೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಅಧಿಕಾರ, ‌ಹಣ, ತೋಳ್ಬಲ ಬಳಸಿಕೊಂಡು ಅಧಿಕಾರಕ್ಕೆ ಬರುತ್ತೇವೆ ಎಂಬ ಕಾಂಗ್ರೆಸ್​ನ ಕಾಲ ಹೊರಟು ಹೋಗಿದೆ. ಅಭಿವೃದ್ಧಿ ಕಾರ್ಯಗಳು, ಜನಪರ ಯೋಜನೆಗಳ ಬಲದಿಂದ ಬಿಜೆಪಿ 130ರಿಂದ 140 ಸ್ಥಾನಗಳಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ ಎನ್ನುವ ಆತ್ಮವಿಶ್ವಾಸದೊಂದಿಗೆ ಜನರ ಬಳಿಗೆ ತೆರಳಬೇಕು. ರಾಜ್ಯ ಬಜೆಟ್​​ನಲ್ಲಿ ನಿರೀಕ್ಷೆಗೆ ಮೀರಿದ ಸವಲತ್ತುಗಳನ್ನು ಘೋಷಿಸಿ ಕಾರ್ಯಕರ್ತರಿಗೆ ಶಕ್ತಿ ತುಂಬಲಿದೆ ಎಂದು ಬಿಎಸ್​ವೈ ಹುರಿದುಂಬಿಸಿದರು.

ಸುಳ್ಳು ಕಾಂಗ್ರೆಸ್ ಜಾಯಮಾನ: ಜನರಿಗೆ ಸುಳ್ಳು ಹೇಳುವುದು ಕಾಂಗ್ರೆಸ್ ಜಾಯಮಾನ. ರಾಜಸ್ಥಾನ, ಛತ್ತೀಸ್​​ಗಢದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕುಟುಕಿದರು. ಕರ್ನಾಟಕದಲ್ಲಿ ಆ ಪಕ್ಷದ ನಾಯಕರು ಕಾರ್ಯಸಾಧುವಲ್ಲದ ಭರವಸೆಗಳನ್ನು ನೀಡುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದ ಅವರು, ಅಮೂಲ್ಯ ಕಾರ್ಯಕರ್ತರ ಪಡೆ, ಸೇವಾ ಮನೋಭಾವ, ಸಂಘಟನಾ ಬಲ, ಅಭಿವೃದ್ಧಿ ಹಾಗೂ ಪಕ್ಷದ ಕಾರ್ಯಕ್ರಮಗಳು ಬಿಜೆಪಿಯ ಪ್ಲಸ್ ಪಾಯಿಂಟ್ ಎಂದು ವಿಶ್ಲೇಷಿಸಿದರು.

ಕೇಂದ್ರ ಬಜೆಟ್​​ನ ವಿಶೇಷತೆ, ರಾಜ್ಯಕ್ಕೆ ನೀಡಿದ ಕೊಡುಗೆಗಳನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿವರಿಸಿದರು. ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಸಹ ಉಸ್ತುವಾರಿ ಡಿ.ಕೆ.ಅರುಣಾ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್ ಇದ್ದರು.