ಬೆಂಗಳೂರು: ವಿಧಾನಸಭೆ ಚುನಾವಣೆ ಸೋಲಿನಿಂದ ಬಿಜೆಪಿಗೆ ಆಗಿರುವ 'ಹಾನಿ ನಿಯಂತ್ರಣ' ಹಾಗೂ ನಾಯಕತ್ವದ ಕುರಿತು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಶುಕ್ರವಾರ ಮಹತ್ವದ ಮಾತುಕತೆ ನಡೆಸಿದರು.
ಬಿಎಸ್ವೈ ಅವರನ್ನು ಖುದ್ದು ಭೇಟಿಯಾದ ಬೊಮ್ಮಾಯಿ, ಬೆಂಗಳೂರಿನ ಗಾಂಧಿ ಭವನದಲ್ಲಿ ಜೂನ್ 6ರಂದು ಆಯೋಜಿಸಿರುವ ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಅವರ 99ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಇದೇ ಸಂದರ್ಭದಲ್ಲಿ ಆರ್ಎಸ್ಎಸ್ನ ಮುಕುಂದ್ ಅವರು ಪಕ್ಷದ ಒಬ್ಬೊಬ್ಬರೇ ಹಿರಿಯ ನಾಯಕರನ್ನು ಆಹ್ವಾನಿಸಿ ಸಮಾಲೋಚನೆ ಮೂಲಕ ಅಭಿಪ್ರಾಯ ಸಂಗ್ರಹಿಸುತ್ತಿರುವ ವಿಚಾರ ಪ್ರಸ್ತಾಪವಾಗಿದೆ. ಇದನ್ನೂ ಓದಿ: ಬಿಜೆಪಿಯವರೇ ತಪ್ಪು ಮಾಡಿದರೆ ಅವರನ್ನು ಹಿಡಿದು ಜೈಲಿಗೆ ಹಾಕಿ: ಪ್ರತಾಪ್ ಸಿಂಹ
ವಿಧಾನ ಮಂಡಲ ಉಭಯ ಸದನಗಳು ಹಾಗೂ ಪಕ್ಷದ ರಾಜ್ಯ ನಾಯಕತ್ವ, ವಿಧಾನಸಭೆ ಚುನಾವಣೆ ಸೋಲಿನಿಂದ ಉಂಟಾಗಿರುವ ಹಾನಿ ನಿವಾರಣೆ ಹಾಗೂ ಲೋಕಸಭೆ ಚುನಾವಣೆ ತಯಾರಿ ಕುರಿತು ಪಕ್ಷದ ಹಿರಿಯ ಮುಖಂಡರ ಜತೆಗೆ ಸಂಘದ ಪ್ರಮುಖರು ವಿಚಾರ ವಿನಿಮಯ ನಡೆಸುತ್ತಿದ್ದು, ಪ್ರಾತಿನಿಧ್ಯದಲ್ಲಿ ಸಮತೋಲನ ಮತ್ತು ಕಾಂಗ್ರೆಸ್ನ ತಂತ್ರಕ್ಕೆ ಪ್ರತಿಯಾಗಿ ಸೂಕ್ತ ಕಾರ್ಯತಂತ್ರ ರೂಪಿಸುವ ಅವಶ್ಯಕತೆ ಕುರಿತು ಬಿಎಸ್ ವೈ ಹಾಗೂ ಬೊಮ್ಮಾಯಿ ವಿಚಾರ ವಿನಿಮಯ ಮಾಡಿಕೊಂಡರು ಎಂದು ಮೂಲಗಳು ತಿಳಿಸಿವೆ.