ಬೆಂಗಳೂರು: ಅಧಿಕಾರ ನಡೆಸಲು ಜನಾದೇಶ ನೀಡಿದರೆ, ಕಾಂಗ್ರೆಸ್ನವರು ಹೋರಾಟಕ್ಕೆ ಇಳಿದಿರುವುದು ನಾಚಿಕೆಗೇಡು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ: ಮಾಜಿ ಸಿಎಂ ಬೊಮ್ಮಾಯಿ, ಆರ್. ಅಶೋಕ್ ಪೊಲೀಸ್ ವಶಕ್ಕೆ
ಪರವಾನಗಿ ಇಲ್ಲದೆ ಪ್ರತಿಭಟನೆ ನಡೆಸಿದ ಕಾರಣಕ್ಕೆ ಪೊಲೀಸರು ವಶಕ್ಕೆ ಪಡೆದು ಕರೆ ತಂದಿದ್ದ ಹೈಗ್ರೌಂಡ್ಸ್ ಠಾಣೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಧಮ್ಮು, ತಾಕತ್ತಿನ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಬಡವರ ಬಗ್ಗೆ ನಿಜವಾದ ಕಾಳಜಿ, ತಾಕತ್ತಿದ್ದರೆ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಸಂಗ್ರಹಿಸಿ ತಲಾ 15 ಕೆಜಿ ವಿತರಿಸಬೇಕು ಎಂದು ಸಡ್ಡು ಹೊಡೆದರು.
ಚುನಾವಣೆಯಲ್ಲಿ ಪ್ರತಿಯೊಬ್ಬರಿಗೆ ತಲಾ ಹತ್ತು ಕೆ.ಜಿ ಎಂದು ಹೇಳಿದ್ದಾರೆ. ಈಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡುತ್ತಿರುವ ಐದು ಕೆ.ಜಿ ಜತೆಗೆ 10 ಕೆಜಿ ಪ್ರತಿಯೊಬ್ಬರಿಗೆ ಹಂಚುವ ತಾಕತ್ತು ತೋರಿಸಿ, ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತದೆ. ಗ್ಯಾರಂಟಿಗಳ ವಿಷಯದಲ್ಲಿ ಸುಳ್ಳು ಜನರಿಗೆ ಮೋಸ ಮಾಡುತ್ತಲೇ ಬಂದಿರುವ ಕಾಂಗ್ರೆಸ್ ಪಕ್ಷ, ಕೇಂದ್ರದ ಅಕ್ಕಿಯನ್ನು ತಮ್ಮದೆಂದು ಹೇಳಿಕೊಳ್ಳುತ್ತಿದೆ. ಕಾಂಗ್ರೆಸ್ ಜನ ವಿರೋಧಿ ನೀತಿ, ಸುಳ್ಳು ಹಾಗೂ ವಂಚನೆ ವಿರುದ್ಧ ಸದನದ ಒಳಗೆ, ಹೋರಾಟ ಮುಂದುವರಿಸುತ್ತೇವೆ. ಎಂದು ಬೊಮ್ಮಾಯಿ ಗುಡುಗಿದರು.