ಜಿಲ್ಲೆ

ಮಾಜಿ ಸಿಎಂ ಬಂಗಾರಪ್ಪ ಕೊಡುಗೆ ಅಪಾರ

ಶಿರಸಿ: ಬಂಗಾರಪ್ಪ ಅವರು ರೈತಪರ ಮುಖ್ಯಮಂತ್ರಿಯಾಗಿದ್ದರು. ಬಂಗಾರಪ್ಪ ಅವರ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿ ಬಹಳಷ್ಟಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ದಿ. ಎಸ್. ಬಂಗಾರಪ್ಪ ಅವರ ಜನ್ಮ ದಿನೋತ್ಸವದ ಅಂಗವಾಗಿ ನಗರದಲ್ಲಿ ಶನಿವಾರ ಬಂಗಾರಪ್ಪನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ರೈತರಿಗೆ ಪಂಪ್​ಸೆಟ್​ಗೆ ಉಚಿತ ವಿದ್ಯುತ್ ಸೌಲಭ್ಯ ಒಳಗೊಂಡು ಅವರು ನೀಡಿದ ಕೊಡುಗೆ ಅಮೂಲ್ಯವಾಗಿದೆ. ಅವರ ಆಡಳಿತದ ಪ್ರತಿಯೊಂದು ಯೋಜನೆಗಳೂ ನಮಗೆ ಮಾದರಿ. ಬಗರ್ ಹುಕುಂ ಹಾಗೂ ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ಒದಗಿಸುವ ಯತ್ನ ಅವರ ಅವಧಿಯಲ್ಲಿ ನಡೆದಿತ್ತು. ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಕಳೆದ ಎರಡು ವರ್ಷಗಳ ಹಿಂದೆಯೇ ನಾವು ಅತಿಕ್ರಮಣದಾರರ ಸಭೆ, ಹೋರಾಟ ನಡೆಸಿದ್ದೇವೆ. ಈಗ ನಮ್ಮ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ಮೇಲೆ ಅತಿಕ್ರಮಣದಾರರಿಗೆ ರಾಜ್ಯ ಸರ್ಕಾರದಿಂದ ನ್ಯಾಯ ಒದಗಿಸುವ ಪ್ರಯತ್ನ ನಡೆಸಿದ್ದೇವೆ. ಅತಿಕ್ರಮಣದಾರರ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುತ್ತೇವೆ. ಅನುಷ್ಠಾನಕ್ಕೆ ಕಾನೂನು ಅನ್ವಯ ಹಾಗೂ ಕೇಂದ್ರ ಸರ್ಕಾರದ ಮಂಜೂರಿ ಅಗತ್ಯವಿದೆ. ಈಗಾಗಲೇ ಪಕ್ಷಾತೀತ ಸಭೆ ಸಹ ನಡೆಸಿ ಸಮಸ್ಯೆ ಬಗೆಹರಿಸಲು ಯತ್ನಿಸಿದ್ದೇವೆ. ಇಂದು ಕೆಲ ಸ್ವಾರ್ಥಿಗಳು ಕಾನೂನನ್ನು ದುರುಪಯೋಗಿಸಿಕೊಂಡು ಅತಿಕ್ರಮಣದಾರರಿಗೆ ನೊಟೀಸ್ ನೀಡುವ ಕಾರ್ಯ ಮಾಡಿದ್ದಾರೆ. ಏನೇ ಆದರೂ, ಬಂಗಾರಪ್ಪ ಅವರ ಕನಸಾದ ಅತಿಕ್ರಮಣದಾರರಿಗೆ ನ್ಯಾಯ ಒದಗಿಸುವ ಕಾರ್ಯ ನಾವು ಮಾಡಲಿದ್ದೇವೆ. ಕಸ್ತೂರಿ ರಂಗನ್ ವರದಿ ಜಾರಿಯನ್ನು ಸಾರಾಸಗಟಾಗಿ ತಿರಸ್ಕರಿಸಿ ಕೇಂದ್ರಕ್ಕೆ ವರದಿ ಸಲ್ಲಿಸಿದ್ದೇವೆ ಎಂದರು.

ಇದಕ್ಕೂ ಮುನ್ನ ಚಿತ್ರನಟ ಶಿವರಾಜ ಕುಮಾರ ದಂಪತಿ ಬಂಗಾರಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿದರು. ಶಾಸಕ ಭೀಮಣ್ಣ ನಾಯ್ಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಖಾಸಿಂ ಸಾಬ್, ಜ್ಯೋತಿ ಗೌಡ, ಇತರರಿದ್ದರು.