ಜಿಲ್ಲೆ

ಐಟಿ ಸೆಟ್ ವೆಚ್ಚ ರೈತರ ಹೆಗಲಿಗೆ: ರಾಜ್ಯಸರ್ಕಾರ ಆದೇಶದಿಂದ ಸ್ಥಗಿತಗೊಂಡಿರುವ ಕಾಮಗಾರಿಯ ಮೊತ್ತ ಎಷ್ಟು ಗೊತ್ತಾ?

ಕೆ.ಎನ್.ರಾಘವೇಂದ್ರ

ಮಂಡ್ಯ: ಕೃಷಿ ಅವಲಂಬನೆಗಾಗಿ ಅಕ್ರಮ-ಸಕ್ರಮ ಕಾಯ್ದೆಯಡಿ ಬೋರ್‌ವೆಲ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ತಗಲುವ ವೆಚ್ಚವನ್ನು ರೈತರೇ ನೀಡುವಂತೆ ರಾಜ್ಯಸರ್ಕಾರ ಹೊರಡಿಸಿರುವ ಆದೇಶ ಅವೈಜ್ಞಾನಿಕ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆಂದು ಕೆ.ಆರ್.ಪೇಟೆ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಬೂಕಹಳ್ಳಿ ಮಂಜು ಆಕ್ರೋಶ ವ್ಯಕ್ತಪಡಿಸಿದರು.

ಸ್ವಂತ ಹಣದಲ್ಲಿ ಬೋರ್‌ವೆಲ್ ತೆಗೆಸಿ ತಾತ್ಕಾಲಿಕ ವಿದ್ಯುತ್ ಪಡೆದಿರುವ ರೈತರು, ವಿದ್ಯುತ್ ಸಕ್ರಮಕ್ಕಾಗಿ ತಲಾ 20 ಸಾವಿರ ರೂಗಳನ್ನು ಇಲಾಖೆಗೆ ಪಾವತಿಸಿ ಕಳೆದ 2-3 ವರ್ಷದಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದು, ಕೂಡಲೇ ಸಂಬಂಧಿಸಿದ ಕಾಮಗಾರಿ ಆರಂಭಕ್ಕೆ ಸರ್ಕಾರ ಆಸಕ್ತಿ ವಹಿಸಬೇಕೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ರಾಜ್ಯದ ಬೆಸ್ಕಾಂ ವ್ಯಾಪ್ತಿಯಲ್ಲಿ 900 ಕೋಟಿ ರೂ, ಸೆಸ್ಕ್ ವ್ಯಾಪ್ತಿಯಲ್ಲಿ 237 ಕೋಟಿ ರೂ ಹಾಗೂ ಎಸ್ಕಾಂ ವ್ಯಾಪ್ತಿಯಲ್ಲಿ 400 ಕೋಟಿ ರೂ ಕಾಮಗಾರಿ ಕೈಗೆತ್ತಿಕೊಳ್ಳುವ ಹಂತದಲ್ಲಿ ಸ್ಥಗಿತಗೊಳಿರುವುದರಿಂದ ರೈತರಿಗೆ ತೊಂದರೆಯಾಗಿದೆ. ಈ ಬಗ್ಗೆ ಸರ್ಕಾರ ಮುತುವರ್ಜಿ ವಹಿಸಬೇಕು. ಅ.7ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಂತೆ ನೂತನವಾಗಿ ಐಪಿ ಸೆಟ್ ಅಳವಡಿಸಿಕೊಳ್ಳುವ ರೈತರು ಲಕ್ಷಾಂತರ ರೂ ವ್ಯಯಿಸಿ ವಿದ್ಯುತ್ ಕಂಬ, ಟಿ.ಸಿ ಹಾಗೂ ವೈಯರ್ ಅಳವಡಿಕೆಗೆ ಮುಂದಾಗಬೇಕೆಂಬ ಆದೇಶ ರೈತ ವಿರೋಧಿಯಾಗಿದೆ. ಈ ಕಾಯ್ದೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

ಕೃಷಿಕ ಮಹದೇವು ಮಾತನಾಡಿ, ನಾನು ಬೂಕನಕೆರೆ ಬಳಿ ಜಮೀನಿನಲ್ಲಿ 15 ಲಕ್ಷ ರೂ ಖರ್ಚು ಮಾಡಿ ಬಾಳೆ ಮತ್ತು ಅಡಿಕೆ ಗಿಡ ಹಾಕಿದ್ದೇನೆ. ಒಂದು ವೇಳೆ ಅಕ್ರಮ ಸಕ್ರಮ ಯೋಜನೆ ಜಾರಿಯಾಗದಿದ್ದರೆ ಸಾಲದ ಶೂಲಕ್ಕೆ ಸಿಲುಕಬೇಕಾಗುತ್ತದೆ. ಆದ್ದರಿಂದ ರಾಜ್ಯಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಿದರು.

ಕೃಷಿಕರಾದ ಸತೀಶ್, ದಿನೇಶ್, ನಾಗೇಶ್ ಇದ್ದರು.