ಜಿಲ್ಲೆ

ಉಡುಪಿ ನಗರಸಭೆಯಿಂದ ಜನರ ತೆರಿಗೆ ಹಣ ಪೋಲು

ಬಿಜೆಪಿ ಮಾಜಿ ಶಾಸಕ ಕೆ. ರಘುಪತಿ ಭಟ್​ ಆರೋಪ

ಹಳೆಯ ಟೆಂಟರ್​ ರದ್ದು ಮಾಡದೆ ಹೊಸ ಟೆಂಡರ್​

ವಿಜಯವಾಣಿ ಸುದ್ದಿಜಾಲ ಉಡುಪಿ

ನಗರದಲ್ಲಿ ಟ್ರಾಫಿಕ್​ ಸಿಗ್ನಲ್​ ಅಳವಡಿಕೆ ವಿಚಾರವಾಗಿ ಹಳೆಯ ಟೆಂಡರ್​ ರದ್ದು ಪಡಿಸದೆ ಹೊಸ ಟೆಂಡರ್​ ಕರೆಯುವ ಮೂಲಕ ನಗರಸಭೆಯಿಂದ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಲಾಗುತ್ತಿದೆ ಎಂದು ಆರೋಪ ವ್ಯಕ್ತಪಡಿಸಿದ ಮಾಜಿ ಶಾಸಕ ಕೆ. ರಘುಪತಿ ಭಟ್, ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗಬಾರದು ಎಂದು ಸಲಹೆ ನೀಡಿದರು.

ಉಡುಪಿಯ ತಮ್ಮ ಸ್ವಗೃಹದಲ್ಲಿ ಮಂಗಳವಾರ (ನ.11) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಶಾಸಕನಾಗಿದ್ದ ಅವಧಿಯಲ್ಲಿ ಸರ್ಕಾರ, ನಗರಸಭೆಗೆ ಒಂದು ಪೈಸೆ ವ್ಯಯ ಆಗದ ರೀತಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಸ್ಮಾರ್ಟ್​ ಸಿಟಿ, ಸ್ಮಾರ್ಟ್​ ಟ್ರಾಫಿಕ್​ ಮೆನೇಜ್​ಮೆಂಟ್​ ಯೋಜನೆ ಜಾರಿಗೊಳಿಸಿದ್ದೆ. ಅದನ್ನು ಜಾರಿಗೊಳಿಸಿದೆ ವಿನಾಕಾರಣವಾಗಿ ಜನರ ಹಣವನ್ನು ವ್ಯರ್ಥ ಮಾಡಲಾಗುತ್ತಿದೆ ಎಂದರು.

ಜಾರಿಯಾಗದ ಯೋಜನೆ

ನಗರದ ಅಭಿವೃದ್ಧಿಗಾಗಿ ಉಡುಪಿ-ಮಣಿಪಾಲಕ್ಕೆ ಅನ್ವಯವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್​ ಇಂಡಿಯಾ ಯೋಜನೆಗೆ ಪೂರಕವಾಗಿ ಎರಡೂವರೆ ವರ್ಷದ ಹಿಂದೆಯೇ ಡಿಜಿಟಲ್​ ಇನ್​ಫ್ರಾಸ್ಟ್ರಕ್ಚರ್​ ಯೋಜನೆ ಜಾರಿ ಮಾಡಿದ್ದೆ. ಅದಿನ್ನೂ ಜಾರಿಯೇ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಯಾಲಯದ ಮೊರೆ

ನಾನು 2020ರಲ್ಲಿ ಶಾಸಕನಾಗಿದ್ದ ಅವಧಿಯಲ್ಲಿ 'ಸ್ಮಾರ್ಟ್​ ಟ್ರಾಫಿಕ್​ ಮೆನೇಜ್​ಮೆಂಟ್​'ನಡಿ ಪೊಲೀಸರ 24 ಗಂಟೆಗಳ ನಿಗಾದೊಂದಿಗೆ ಎಸ್ಪಿ ಕಚೇರಿಯಲ್ಲಿ ಕಮಾಂಡ್​ ಸೆಂಟರ್​ ಸಹಿತ ನಗರಸಭೆಗೆ ವಾರ್ಷಿಕ 28.80 ಲಕ್ಷ ರೂ. ಆದಾಯ ದೊರೆಯುವ ಯೋಜನೆ ಮಾಡಿದ್ದೆ. ಅಂದು ಇದೇ ಯೋಜನೆಗೆ ನಗರಸಭೆಯಲ್ಲಿ ಅನುಮೋದನೆ ಲಭಿಸಿ ಟೆಂಡರ್​ ಆಗಿತ್ತು. ಇದೀಗ 2025ರಲ್ಲಿ ಮತ್ತದೇ ಕಾಮಗಾರಿಗಾಗಿ ಮತ್ತೊಂದು ಟೆಂಡರ್​ ಕರೆದು ಸಿಗ್ನಲ್​ ಕಂಬ ಅಳವಡಿಸುತ್ತಿದ್ದಾರೆ. ಸಿಸಿಟಿವಿ ಕ್ಯಾಮರಾವನ್ನೂ ಅಳವಡಿಸದೆ ಕೇವಲ ಎರಡು ಜಂಕ್ಷನಗೆ ನಗರಸಭೆ 60 ಲಕ್ಷ ರೂ. ವೆಚ್ಚ ಮಾಡುತ್ತಿದೆ. 12 ಜಂಕ್ಷನ್​ಗೆ 3 ಕೋಟಿ ರೂ. ಸಾರ್ವಜನಿಕರ ತೆರಿಗೆ ಹಣ ವ್ಯಯವಾಗಲಿದೆ. ಇದನ್ನು ಪ್ರಶ್ನಿಸಿ ನ್ಯಾಯಾಲಯ ಅಥವಾ ಲೋಕಾಯುಕ್ತಕ್ಕೆ ದೂರು ನೀಡಲಿದ್ದೇನೆ ಎಂದು ಭಟ್​ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹೇಶ್​ ಠಾಕೂರ್​ ಇದ್ದರು.

ನಗರದಲ್ಲಿ ಜಾಹೀರಾತು ಮಾಫಿಯಾ

ಉಡುಪಿ ನಗರದಲ್ಲಿ ಜಾಹೀರಾತು ಮಾಫಿಯಾ ನಡೆದಿದೆ. ನಗರಸಭೆಗೆ ವಾರ್ಷಿಕವಾಗಿ ಜಾಹೀರಾತಿನಿಂದ 6ರಿಂದ 7ಕೋಟಿ ರೂ. ಆದಾಯ ಬರಬೇಕಿತ್ತು. ಕೇವಲ 25 ಲಕ್ಷ ರೂ. ಬರುತ್ತಿದೆ. ಎಲ್ಲೆಡೆ ಎಲ್​ಇಡಿ ಬೀದಿದೀಪ ಹಾಕಿದ್ದರೆ ಶೇ. 60 ವಿದ್ಯುತ್​ ಹಾಗೂ ಕಟ್ಟುವ ಬಿಲ್​ನ ಹಣವೂ ಉಳಿಯಲಿದೆ. ನಗರದ ಅಭಿವೃದ್ಧಿ ಕುಂಠಿತ ಮಾಡುವ ರಾಜಕೀಯವನ್ನು ನಾನು ಸಹಿಸುವುದಿಲ್ಲ. ಕೋರ್ಟ್​ಗೆ ಹೋದರೆ ನಗರಸಭೆಗೆ ಸಮಸ್ಯೆಯಾದೀತು. ನಾನು ಮಾಡಿದ್ದ ಯೋಜನೆ, ಟೆಂಡರ್​ ತಡೆಹಿಡಿಯುವಲ್ಲಿ ಉಡುಪಿಯ ಪ್ರಸ್ತುತ ಶಾಸಕರ ಪಾತ್ರವಿದೆ. ಅದರಿಂದಾಗಿ ಮಾಜಿ ಸಚಿವ ಡಾ. ವಿ.ಎಸ್​. ಆಚಾರ್ಯ ಅವರು ಕಂಡಿದ್ದ ಕನಸುಗಳಿಗೂ ತೊಡಕಾಗುತ್ತಿದೆ. ಕೆಲವರ ಒತ್ತಾಯದಿಂದ ಜೈಲನ್ನು ಪಾರಂಪರಿಕ ತಾಣ ಮಾಡಲು ಹೊರಟಿರುವುದರಿಂದ ನಗರಸಭೆಗೆ ನೂತನ ಕಟ್ಟಡವೂ ನಿರ್ಮಾಣವಾಗಿಲ್ಲ ಎಂದು ಕೆ.ರಘುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದರು.