ವಿಜಯಪುರದಲ್ಲಿ ಕಾಂಗ್ರೆಸ್​ ಶಾಸಕ ವಿನಯ ಕುಲಕರ್ಣಿ ಸುದ್ದಿಗಾರರೊಂದಿಗೆ ಮಾತನಾಡಿದರು. 
ಜಿಲ್ಲೆ

ಬಿಜೆಪಿ ಮಾಜಿ ಶಾಸಕರು ಕಾಂಗ್ರೆಸ್ ಸೇರಲು ತುದಿಗಾಲಿನಲ್ಲಿದ್ದಾರೆ

ವಿಜಯಪುರ: ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸಿದ್ದರಾಮಯ್ಯ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.

ವಿಜಯಪುರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಸಾಕಷ್ಟು ಜನರು ಇದ್ದಾರೆ. ಎರಡುವರೆ ವರ್ಷದಲ್ಲಿ ಪೂರ್ಣ ಟೀಂ ಬದಲಾಗಲಿದೆ. ಆಗ ಉಳಿದವರಿಗೂ ಸಚಿವ ಸ್ಥಾನದ ಭಾಗ್ಯ ದೊರೆಯಲಿದೆ ಎಂದರು.

135 ಜನ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಆದರೆ ಕೇವಲ 34 ಶಾಸಕರಿಗೆ ಸಚಿವ ಸ್ಥಾನ ದೊರೆಯುತ್ತದೆ. ಹೀಗಾಗಿ ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂದರು.

ನಿಗಮ ಮಂಡಳಿಗೆ 30 ಶಾಸಕರು ಆಯ್ಕೆಯಾದರೆ ಉಳಿದವರು, ಮುಂದಿನ ದಿನಗಳಲ್ಲಿ ಸಚಿವರಾಗಬಹುದು. ಆಗ ಎಲ್ಲ ಶಾಸಕರಿಗೂ ಅವಕಾಶ ಸಿಕ್ಕಂತಾಗುತ್ತದೆ. ಸದ್ಯ ಇರುವ ಸಚಿವರು ಸಮರ್ಥರಿದ್ದಾರೆ. ಅವರಿಗೆ ಕೊಟ್ಟ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಅನಾವಶ್ಯಕವಾಗಿ ಡಿಕೆಶಿ ಅವರನ್ನು ಸೂಪರ ಸಿಎಂ ಎನ್ನುತ್ತಿದ್ದಾರೆ. ನಮ್ಮಲ್ಲಿ ಎಲ್ಲರೂ ಸೂಪರ್ ಆಗಿದ್ದಾರೆ ಎಂದು ಸಮರ್ಥಿಸಿಕೊಂಡರು.

ಹಲವು ಬಿಜೆಪಿ ಮಾಜಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ : ಹಲವಾರು ಬಿಜೆಪಿ ಮಾಜಿ ಶಾಸಕರು, ಮುಖಂಡರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಮೆಚ್ಚಿಕೊಂಡು ಹಲವರು ಬರುತ್ತಿದ್ದಾರೆ. ಕಾಂಗ್ರೆಸ್ ಸೇರಲು ತುದಿಗಾಲು ಮೇಲೆ ನಿಂತಿದ್ದಾರೆ. ಕನಿಷ್ಠ 13-14 ಮಾಜಿ ಶಾಸಕರು ಕಾಂಗ್ರೆಸ್ ಬರಲು ಸಿದ್ದರಿದ್ದಾರೆ ಎಂದು ಶಾಸಕ ವಿನಯ ಕುಲಕರ್ಣಿ ಹೊಸ ಬಾಂಬ್ ಹಾಕಿದರು.

ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕೈ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾವೇನು ಅವರಿಗೆ ಎದುರಾಳಿ ಅಲ್ಲ ಮುನೇನಕೊಪ್ಪ ಅವರಿಗೆ ಸಾಕಷ್ಟು ರಾಜಕೀಯದಲ್ಲಿ ಅನುಭವ ಇದೆ. ಅವರು ನಮ್ಮ ಪಕ್ಷಕ್ಕೆ ಬಂದರೆ ಬಲ ಬರುತ್ತದೆ. ಅವರು ಪಕ್ಷಕ್ಕೆ ಬರುವುದಾದರೆ ಸೇರಿಸಿಕೊಳ್ಳುತ್ತೇವೆ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕಿಡಿಕಾರಿದ ವಿನಯ ಕುಲಕರ್ಣಿ, ಯತ್ನಾಳ ಯಾವಾಗಲೂ ವೈಡ್ ಬಾಲ್ ಹಾಕುತ್ತಾರೆ. ಅವರು ಹಾಕಿದ ಬಾಲ್‌ಗಳಲ್ಲಿ ವಿಕೆಟ್ ಹಾರುತ್ತವೆ ಎನ್ನುವ ಹಾಗಿಲ್ಲ. ಅವರು ನಿತ್ಯದ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಏನು ಆಗಲ್ಲ ಎಂದರು.