ಗುಬ್ಬಿ : ಅಮ್ಮನಘಟ್ಟದ ಕೃಷಿ ಜಮೀನಿನಲ್ಲಿ ಲ ನೀಡುತ್ತಿದ್ದ ತೆಂಗು, ಅಡಕೆ ಮರಗಳನ್ನು ಕತ್ತರಿಸಿರುವ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ನೇತೃತ್ವದ ತಂಡದ ದುಂಡಾವರ್ತನೆ ಖಂಡಿಸಿ ಸಂತ್ರಸ್ತ ರೈತರು, ರೈತ ಸಂಘದ ಕಾರ್ಯಕರ್ತರು ನಡೆಸುತ್ತಿರುವ ಧರಣಿ ಮಂಗಳವಾರ 2ನೇ ದಿನ ಪೂರೈಸಿದ್ದು, ಮತ್ತಷ್ಟು ರೈತರು ಪ್ರತಿಭಟನೆಗೆ ಸಾಥ್ ನೀಡಿದರು. ಬೆಳಿಗ್ಗೆ 10 ರಿಂದ ಮುಂದುವರೆದ ಪ್ರತಿಭಟನೆ ಸಂಜೆವವರೆಗೆ ಸುದೀರ್ಘವಾಗಿ ನಡೆಯಿತು.
ಎರಡನೇ ದಿನದ ಈ ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಹಲವು ಪ್ರಗತಿಪರ ಸಂಘಟನೆಗಳು ಬೆಂಬಲ ಸೂಚಿಸಿದವು. ಸ್ಥಳಕ್ಕೆ ಮೊದಲು ಆಗಮಿಸಿದ ಎಸಿಎಫ್ ಚಿಕ್ಕರಾಜೇಂದ್ರ ಮಾತನಾಡುವ ಸಂದರ್ಭದಲ್ಲಿ ಅರಣ್ಯ ಗಡಿ ಗುರುತಿಸುವ ಕಾರ್ಯ ಮಾಡಿದ್ದು, ಸರಿ ಎನ್ನುವ ಮಾತು ಅಲ್ಲಿದ್ದ ರೈತರನ್ನು ಕೆರಳಿಸಿತ್ತು. ಸಮರ್ಥಿಸಿಕೊಳ್ಳುವವರು ಮೊದಲು ತೆರಳಲು ಸೂಚಿಸಿ ರೈತರು ಆಕ್ರೋಶ ಹೊರ ಹಾಕಿದರು. ಬಂದ ದಾರಿಗೆ ಸುಂಕವಿಲ್ಲ ಎಂದು ಎಸಿಎಫ್ ಹಿಂತಿರುಗಿದರು.
ಮಧ್ಯಾಹ್ನ ಶಾಮಿಯಾನ ಹಾಕಿ ಸ್ಥಳದಲ್ಲೇ ಊಟದ ವ್ಯವಸ್ಥೆ ಮಾಡಿದ ರೈತರು, ಅಡುಗೆ ಕೆಲಸ ಮಾಡುತ್ತಲೇ ಧರಣಿ ನಡೆಸಿದರು. ಸಂಜೆ ವೇಳೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ವಿವರಣೆ ಪಡೆದರು. ಮೇಲಾಧಿಕಾರಿಗಗಳಿಗೆ ವರದಿ ನೀಡಲಾಗುವುದು ಎಂದು ಭರವಸೆ ನೀಡಿದರು.
ನಂತರ ಎರಡು ದಿನದ ಗಡುವು ನೀಡಿದ ರೈತ ಸಂಘದ ಸದಸ್ಯರು ಕ್ರಮ ಕೈಗೊಳ್ಳದಿದ್ದರೆ ಮರಳಿ ಪ್ರತಿಭಟನೆ ಉಗ್ರ ರೂಪಕ್ಕೆ ತೆರಳಲಿದೆ ಎಂದು ಎಚ್ಚರಿಕೆ ನೀಡಿ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದು ಮನವಿಪತ್ರ ಸಲ್ಲಿಸಿದರು.
ತಹಸೀಲ್ದಾರ್ ಬಿ.ಆರತಿ, ಸಿಪಿಐ ನದಾಫ್ ಸ್ಥಳದಲ್ಲಿದ್ದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್, ಗ್ರಾಪಂ ಸದಸ್ಯ ರಮೇಶ್, ಸಿ.ಜಿ.ಲೋಕೇಶ್, ಗುರುಚನ್ನಬಸಪ್ಪ, ಮುಖಂಡರಾದ ಗುರುರೇಣುಕಾರಾಧ್ಯ, ಕೆ.ಆರ್.ವೆಂಕಟೇಶ್, ಶಶಿಕುಮಾರ್, ಜುಂಜೇಗೌಡ, ಮಹಾದೇವಯ್ಯ ಸೇರಿ ಅಮ್ಮನಘಟ್ಟ ಗ್ರಾಮಸ್ಥರು ಇದ್ದರು.
ಅರಣ್ಯಾಧಿಕಾರಿ ಅಮಾನತಿಗೆ ಪಟ್ಟು : ಅಮ್ಮನಘಟ್ಟದಲ್ಲಿ ಅಡಕೆ, ತೆಂಗು ಬೆಳೆಗಳನ್ನು ಅರಣ್ಯ ಇಲಾಖೆ ಕಡಿದಿರುವುದು ವಿಷಾದನೀಯ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ವಲಯ ಅರಣ್ಯಾಧಿಕಾರಿ ಅಮಾನತು ಮಾಡುವಂತೆ ಒತ್ತಾಯಿಸುತ್ತೇನೆ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು. ಧರಣಿಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರ ಜತೆ ಮಾತನಾಡಿದ ಅವರು, ಹಲವು ಬಾರಿ ಅಧಿಕಾರಿಗೆ ಮಾಹಿತಿ ತಿಳಿಸಿದರೂ ರೈತರ ಜತೆ ಸರಿಯಾದ ರೀತಿಯಲ್ಲಿ ನಡೆದುಕೊಳ್ಳದೆ ಇರುವುದು ಬೇಸರ ತರಿಸಿದೆ. ಹಾಗಾಗಿ ತಪ್ಪೆಸಗಿದ ಅಧಿಕಾರಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮಾತನಾಡುತ್ತೇನೆ ಎಂದು ತಿಳಿಸಿದರು.
ಕಷ್ಟಪಟ್ಟು ಬೆಳೆದ ಅಡಕೆ, ತೆಂಗು ಬೆಳೆಗಳನ್ನು ಯಾವುದೇ ಮಾನವೀಯತೆಯಿಲ್ಲದೆ ಕಡಿದಿರುವುದು ತಪ್ಪು. ಇವರೇ ಮೂರು ತಿಂಗಳ ಹಿಂದೆ ಗಡಿಯನ್ನು ಗುರುತಿಸಿ, ಮತ್ತೆ ಈಗ ಮುಂದಕ್ಕೆ ಹೋಗಿ ರೈತರ ಬೆಳೆಗಳನ್ನು ಹಾಳು ಮಾಡಿರುವುದು ಇವರ ದುರಹಂಕಾರದ ಪರಮಾವಧಿ. ಗೋವಿಂದರಾಜು ಜಿಲ್ಲಾ ರೈತ ಸಂಘದ ಅಧ್ಯಕ್ಷ ಶೀಘ್ರದಲ್ಲಿಯೇ ಅಡಕೆ, ತೆಂಗನ್ನು ನಾಶ ಮಾಡಿದ ಅಮ್ಮನಘಟ್ಟ ಗ್ರಾಮಕ್ಕೆ ತೆರಳಿ ಪರಿಶೀಲಿಸಲಾಗುವುದು. ಅಧಿಕಾರಿಯದ್ದು ತಪ್ಪಾಗಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲು ಮೇಲಾಧಿಕಾರಿಗಳಿಗೆ ವರದಿ ಅನುಸರಿಸುತ್ತೇನೆ. ರಮೇಶ್, ಡಿಎಫ್‌ಒ