ಸುಂಟಿಕೊಪ್ಪ : ಸುಂಟಿಕೊಪ್ಪ ಪದವಿಪೂರ್ವ ಕಾಲೇಜಿನಲ್ಲಿ 2024-25 ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಮಾದರಿ ಕಾಲೇಜು ಸಂಸತ್ ರಚಿಸುವ ಮೂಲಕ ಆಯ್ಕೆ ಮಾಡಲಾಯಿತು.
ಬಳಿಕ ಮಾತನಾಡಿದ ಸಂಚಾಲಕಿ ಹಾಗೂ ಮತದಾರ ಸಾಕ್ಷರತಾ ಅಧಿಕಾರಿ ಸರಳಾ, ನಾಳಿನ ಸುಂದರ ದೇಶವನ್ನು ಕಟ್ಟುವ ಆಯುಧವೇ ಮತದಾನ. ಸಂವಿಧಾನವು ನಮಗೆ ಮತದಾನದ ಪವಿತ್ರದ ಹಕ್ಕು ಕೊಟ್ಟು ದೇಶಕಟ್ಟುವ ಕಾಯಕದಲ್ಲಿ ಪ್ರಜೆಗಳು ಭಾಗಿಯಾಗುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಪ್ರತೀ ಸಲ ಚುನಾವಣೆ ಬಂದಾಗ ಮತದಾನ ಪ್ರಕ್ರಿಯೆಯಲ್ಲಿ ಅರ್ಹ ಮತದಾರರೆಲ್ಲರೂ ತಮ್ಮ ಹಕ್ಕು ಚಲಾಯಿಸುವ ಮೂಲಕ ಸುಭದ್ರ ದೇಶ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಲತಾ ಮಾತನಾಡಿದರು. ಕಾಲೇಜು ವಿದ್ಯಾರ್ಥಿಗಳು ಈಗಿನಿಂದಲೇ ಮತದಾನದ ಶ್ರೇಷ್ಠತೆ, ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಚುನಾವಣೆ ಸಂದರ್ಭಗಳಲ್ಲಿ ತಮ್ಮ ಹಕ್ಕುಗಳನ್ನು ಚಲಾಯಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಗೌಪ್ಯ ಮತದಾನ ನಡೆಯಿತು. ಉಪನ್ಯಾಸಕರಾದ ಸುನೀತಾ, ಅಭಿಷೇಕ್, ಪದ್ಮಾವತಿ, ಸುಚಿತ್ರಾ, ಅನುಷಾ, ಸಂಧ್ಯಾ, ಕವಿತಾಭಕ್ತಾ, ಈಶ ಮತ ಎಣಿಕೆ ಕಾರ್ಯ ನಡೆಸಿಕೊಟ್ಟರು. ಕಾಲೇಜು ನಾಯಕನಾಗಿ ಜೋಶ್ವರದಿ, ಉಪನಾಯಕಿಯಾಗಿ ರಿಶಾನಾ, ಕ್ರೀಡಾಮಂತ್ರಿಯಾಗಿ ಸಾಹುಲ್‌ಹಮಿತಿ, ಸಾಂಸ್ಕೃತಿಕ ಮಂತ್ರಿಯಾಗಿ ಫಾತಿಮತ್ ಸುಹೇರಾ, ಆರೋಗ್ಯ ಮಂತ್ರಿ ಹಾಗೂ ಸ್ವಚ್ಛತಾ ಮಂತ್ರಿಯಾ ಸಮೀರಾ ಆಯ್ಕೆಯಾದರು.