ಜಿಲ್ಲೆ

ಖನಿಜ ಉತ್ಪಾದನಾ ಪಡೆ ರಚನೆ: ಸರ್ಕಾರ ನಿರ್ಧಾರ, ಗಣಿ ಮತ್ತು ಭೂವಿಜ್ಞಾನ ಸಚಿವ ಸಚಿವ ಸಿಸಿ ಪಾಟೀಲ್ ಹೇಳಿಕೆ

ಬಿಡದಿ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಖನಿಜ ಉತ್ಪಾದನಾ ಪಡೆ (ಮಿನರಲ್ ಪೊ›ಡಕ್ಸನ್ ಪೋರ್ಸ್) ರಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಬಿಡದಿ ಹೋಬಳಿಯ ಉರಗಹಳ್ಳಿ ಗಣಿಗಾರಿಕೆ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಜಿಲ್ಲಾವಾರು ಲಭ್ಯ ವಾಗುವ ಗಣಿಗಾರಿಕೆ ಅಭಿವೃದ್ಧಿ ಅನುದಾನ ದಲ್ಲಿ ಈ ಪಡೆ ರಚಿಸಲು ನಿರ್ಧರಿಸ ಲಾಗಿದೆ. ಇದರ ರಚನೆಯಿಂದ ಇಲಾಖೆಗೆ ಶಕ್ತಿ ದೊರೆಯ ಲಿದೆ. ಇದಕ್ಕೆ ಹಣಕಾಸು ಇಲಾಖೆ ಕೂಡ ಅನುಮೋದನೆ ನೀಡಿದೆ. ಈ ಪಡೆಗೆ ಮಾಜಿ ಸೈನಿಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಇವರಿಗೆ ಗಣಿಗಾರಿಕೆ ಅಭಿವೃದ್ಧಿ ಅನುದಾನದಲ್ಲಿ ವೇತನ ನೀಡಲಾಗುವುದು. ಈ ಪಡೆಯಿಂದ ಚೆಕ್​ಪೋಸ್ಟ್ ಗಳು ಬಲಗೊಳ್ಳಲಿವೆ ಹಾಗೂ ಖನಿಜಗಳ ಅಧಿಕ ಲೋಡ್ ಸಾಗಣೆ ಪರಿಶೀಲಿಸಲು ಅನುಕೂಲವಾಗುತ್ತದೆ ಎಂದರು.

ಗಣಿಗಾರಿಕೆಯಿಂದ ಇಲಾಖೆಗೆ ಪ್ರತಿವರ್ಷ ಡಿಎಂಎ ನಿಧಿ ಬರುತ್ತದೆ. ಈ ಹಣವನ್ನು ಗಣಿಗಾರಿಕೆ ನಡೆಯುತ್ತಿರುವ ಸುತ್ತಲಿನ ಪ್ರದೇಶಗಳ ರಸ್ತೆಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಗಣಿಗಾರಿಕೆ ನಡೆಸುವ ಸ್ಥಳದಲ್ಲಿ ಮಣ್ಣಿನ ರಸ್ತೆ ಇದ್ದರೆ. ಮಾಲೀಕರು ದಿನಕ್ಕೆ 2 ಬಾರಿ ರಸ್ತೆಗೆ ನೀರು ಹಾಕಬೇಕು. ಈ ಬಗ್ಗೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಸೂಚಿಸಿದರು.

ಕೆಆರ್​ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್, ಬೆಂಗಳೂರು-ಬಿಡದಿ ಸ್ಮಾರ್ಟ್​ಸಿಟಿ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವರದರಾಜುಗೌಡ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುರಳೀಧರ್, ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್ ಇತರರು ಇದ್ದರು.

ಒತ್ತುವರಿ, ಅತಿಕ್ರಮಣಕ್ಕೆ ದಂಡ

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 40 ಗಣಿ ಕಂಪನಿ ಹಾಗೂ ಜೆಲ್ಲಿ ಕ್ರಷರ್​ಗಳ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿ ಮಾಹಿತಿ ಪಡೆಯುತ್ತೇನೆ. ಗಣಿಗಾರಿಕೆಗೆ ಸರ್ಕಾರದ ಜಮೀನು ಒತ್ತುವರಿ ಮತ್ತು ಅತಿಕ್ರಮಣ ಮಾಡಿರುವುದು ಕಂಡುಬಂದರೆ ದಂಡ ವಿಧಿಸಲಾಗುವುದು. ಸುರಕ್ಷತಾ ವಲಯಗಳ ಅಡಿಯಲ್ಲಿ ಗಣಿಗಾರಿಕೆ ನಡೆಸಬೇಕು ಎಂಬ ನಿಯಮ ಇದೆ. ಅದರಂತೆ ಕಾರ್ಯನಿರ್ವಹಿಸಬೇಕು. ವಾಹನಗಳಲ್ಲಿ ಓವರ್​ಲೋಡ್ ಸಾಗಣೆ ಮಾಡುವುದು ರಾಮನಗರ ಜಿಲ್ಲೆಗೆ ಸೀಮಿತವಾಗಿಲ್ಲ. ಇಡೀ ರಾಜ್ಯದಲ್ಲಿ ಈ ಸಮಸ್ಯೆ ಇದೆ. ಸಾರಿಗೆ ಹಾಗೂ ಪೊಲೀಸ್ ಅಧಿಕಾರಿಗಳ ಜತೆ ರ್ಚಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪಾಟೀಲ್ ತಿಳಿಸಿದರು.