ಬಳ್ಳಾರಿ : ಜಿಲ್ಲೆಯ ಸರಣಿ ಬಾಣಂತಿಯರ ಸಾವಿನ ಕುರಿತು ಹಾಗೂ ಇದೇ ತರಹದ ಪ್ರಕರಣಗಳು ಮರುಕಳುಹಿಸಿದಂತೆ ಮೂಲ ವ್ಯವಸ್ಥೆಯ ಸುಧಾರಣೆಗಳನ್ನು ತರಲು ಸೂಕ್ತ ಶಿಫಾರಸ್ಸುನೊಂದಿಗೆ ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ನದೀಮ್ ಅಹ್ಮದ್ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಕನಗವಲ್ಲಿ, ಔಷಧಿ ನಿಯಂತ್ರಣ ಇಲಾಖೆಯ ಸಹಾಯಕ ನಿಯಂತ್ರಕ ವೆಂಕಟೇಶ, ಬೆಂಗಳೂರು ವೈದ್ಯಕೀಯ ಕಾಲೇಜಿನ ಮೈಕ್ರೋಬಯೋಲಜಿಸ್ಟ್ ಡಾ. ಆಸೀಮಾ ಬಾನು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಉಪ ಕುಲಪತಿಯವರಿಂದ ನಾಮ ನಿರ್ದೇಶಿತ ಒಬ್ಬ ಹಿರಿಯ ಫಾರ್ಮಾಕಾಲಜಿ ಪ್ರಾಧ್ಯಾಪಕ ತಂಡವು ಸೂಕ್ತವಾದ ತನಿಖೆ ನಡೆಸಿ ಐದು ದಿನಗಳೊಳಗಾಗಿ ಸಮಿತಿ ಅಧ್ಯಕ್ಷರಿಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಕೆಎಸ್‌ಎಂಎಸ್‌ಸಿಎಲ್ ರವರು ಟೆಂಡರ್ ಮೂಲಕ ಔಷಧಿಗಳ ಖರೀದಿ ಮತ್ತು ಎಂಪ್ಯಾನಲ್ಡ್ ಲ್ಯಾಬೋರೇಟರಿಗಳಿಗೆ ಔಷಧಿಗಳ ಮಾದರಿಗಳನ್ನು ಒಳಪಡಿಸುವಲ್ಲಿ ಆಗಿರುವ ನಿಯಮಗಳ ಉಲ್ಲಂಘನೆಗಳ ಬಗ್ಗೆ, ಕೆಎಸ್‌ಎಂಎಸ್‌ಸಿಎಲ್ ಅಧಿಕಾರಿಗಳ ಪಾತ್ರ ಮತ್ತು ಲೋಪಗಳನ್ನು ಎಸಗಿದ ಅಧಿಕಾರಿಗಳ ಮೇಲೆ ಜವಾಬ್ದಾರಿಗಳನ್ನು ನಿಗದಿ ಮಾಡುವ ಬಗ್ಗೆ ಮತ್ತು ಕೆಎಸ್‌ಎಂಎಸ್‌ಸಿಎಲ್ ನಲ್ಲಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳನ್ನು ಸೇರಿದಂತೆ ಇತ್ಯಾದಿ ಅಂಶಗಳ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಆದೇಶಿಸಲಾಗಿದೆ.