ವಿಜಯವಾಣಿ ಸುದ್ದಿಜಾಲ ಧಾರವಾಡ
ಹಗರಣಗಳಿಂದಲೇ ತುಂಬಿ ತುಳುಕುತ್ತಿರುವ ಕಾಂಗ್ರೆಸ್ ಸರ್ಕಾರ ಈಗ ಹಳೇ ಸರ್ಕಾರಗಳ ಹಗರಣಗಳ ತನಿಖೆಗೆ ಸಂಪುಟ ಉಪ ಸಮಿತಿ ರಚಿಸಿ, ಸಚಿವರಾದ ಡಾ. ಜಿ.ಪರಮೇಶ್ವರ, ಪ್ರಿಯಾಂಕ ರ್ಖಗೆ, ಕೃಷ್ಣ ಭೈರೇಗೌಡ, ಸಂತೋಷ ಲಾಡ್ ಅವರನ್ನು ನೇಮಿಸಿದೆ. ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಸರ್ಕಾರ ಇಷ್ಟು ಕೆಳ ಮಟ್ಟಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಧಿಕಾರಕ್ಕೆ ಬಂದು ಒಂದೂವರೆ ವರ್ಷದ ಮೇಲೆ ಬಿಜೆಪಿಯ ಹಗರಣಗಳನ್ನು ಬಹಿರಂಗಪಡಿಸುವ ನೆನಪಾಗಿರುವುದು ವಿಪರ್ಯಾಸ. ರಾಜ್ಯದ ಜನತೆಯ ಗಮನವನ್ನು ಬೇರೆಡೆಗೆ ಹರಿಸುವ ದುರುದ್ದೇಶ ಇದರ ಹಿಂದಿದೆ ಎಂಬುದು ಸ್ಪಷ್ಟ. ಸರ್ಕಾರಕ್ಕೆ ನಿಜವಾಗಿಯೂ ಬಿಜೆಪಿ ಸರ್ಕಾರದ ಹಗರಣಗಳನ್ನು ಬಹಿರಂಗಪಡಿಸುವ ಉದ್ದೇಶವಿದ್ದರೆ, ಈವರೆಗೆ ಕಾಯುವ ಅವಶ್ಯಕತೆ ಏನಿತ್ತು? ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಇಲ್ಲಿಯವರೆಗೇಕೆ ಬಹಿರಂಗಪಡಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ರಾಜ್ಯದ ಜನತೆ ಕಣ್ಣು ಮುಚ್ಚಿ ಕುಳಿತಿಲ್ಲ. ಸತ್ಯಾಸತ್ಯತೆಯ ಅರಿವು ಜನತೆಗಿದೆ. ಜನರನ್ನು ದಿಕ್ಕು ತಪ್ಪಿಸುವ ನಿಮ್ಮ ಪ್ರಯತ್ನ ಎಂದಿಗೂ ಫಲಿಸದ ಕಾರ್ಯ. ಈ ವ್ಯರ್ಥ ಪ್ರಯತ್ನ ಬಿಟ್ಟು ಈವರೆಗೆ ನಡೆದ ನಿಮ್ಮ ಸರ್ಕಾರದ ಹಗರಣಗಳ ತನಿಖೆ ಪಾರದರ್ಶಕವಾಗಿ ಆಗಲಿ. ಇಂತಹ ಹೆದರಿಕೆಗಳಿಗೆ ನಾವು ಎಂದಿಗೂ ಬಗ್ಗುವುದಿಲ್ಲ. ವಾಲ್ಮೀಕಿ, ಮುಡಾ ಹಗರಣಗಳ ಸತ್ಯ ಬಹಿರಂಗವಾಗುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ತಿಳಿಸಿದ್ದಾರೆ.