ಭದ್ರಾವತಿ ಎಂಪಿಎಂ ಕಾರ್ಖಾನೆ ವಿಚಾರ ಸಂಬಂಧ ಆಯೋಜಿಸಿದ್ದ ಸಭೆಯಲ್ಲಿ ಎಂ.ಬಿ.ಪಾಟೀಲ್, ಬಿ.ಕೆ.ಸಂಗಮೇಶ್ವರ್, ಡಾ. ಆರ್.ಸೆಲ್ವಮಣಿ ಪಾಲ್ಗೊಂಡಿದ್ದರು. 
ಜಿಲ್ಲೆ

ಎಂಪಿಎಂ ಖಾಸಗೀಕರಣಕ್ಕೆ ಚಿಂತನೆ

ಭದ್ರಾವತಿ: ಬೀಗಮುದ್ರೆ ಕಂಡಿರುವ ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್ (ಎಂಪಿಎಂ) ಕಾರ್ಖಾನೆಗೆ ಮರುಜೀವ ನೀಡಲು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ಸಂಬಂಧ ಅವರು ಸ್ಥಳೀಯ ಶಾಸಕ ಬಿ.ಕೆ. ಸಂಗಮೇಶ್ವರ್ ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಬುಧವಾರ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು.
ಸಭೆಯಲ್ಲಿ ವಿಸ್ತೃತ ವಿಚಾರ ವಿನಿಮಯ ನಡೆಸಿದ ಅವರು, ಕಾರ್ಖಾನೆ ಉಳಿಸಿಕೊಂಡಿರುವ ಸಾಲದ ಮೊತ್ತ, ವಿದ್ಯುತ್ ಬಿಲ್ ಮತ್ತು ಮುಂದಿನ ಹಾದಿ ಏನಾಗಿರಬೇಕು ಎಂಬ ಬಗ್ಗೆ ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಸಚಿವರು ಸೂಚಿಸಿದರು.. ಈ ಸಭೆಗೆ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರನ್ನೂ ಸಭೆಗೆ ಕರೆಯಲು ಸೂಚಿಸಿದ್ದಾರೆ.
ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಅವರ ಕನಸಿನ ಕೂಸಾದ ಮೈಸೂರು ಪೇಪರ್ ಮಿಲ್ಸ್ ಸದ್ಯಕ್ಕೆ 1,482 ಕೋಟಿ ರೂ. ನಷ್ಟದ ಸುಳಿಯಲ್ಲಿದೆ. ಜತೆಗೆ 229 ಕೋಟಿ ರೂ.ಗಳಷ್ಟು ವಿದ್ಯತ್‌ಬಿಲ್ ಬಾಕಿ ಉಳಿಸಿಕೊಂಡಿದೆ. ರಾಜ್ಯ ಸರ್ಕಾರ 2010ರಿಂದ ಈವರೆಗೆ 850 ಕೋಟಿ ರೂ. ಸಾಲದ ರೂಪದಲ್ಲಿ ಕೊಟ್ಟಿದೆ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಎಂಪಿಎಂ ಖಾಸಗೀಕರಣಕ್ಕೆ ಯತ್ನ ನಡೆದಿತ್ತು. ಸಂಸ್ಥೆ ಮೇಲೆ ಇರುವ ಆರ್ಥಿಕ ಹೊರೆಯನ್ನು ನಿಭಾಯಿಸಲು ಹಣಕಾಸು ಇಲಾಖೆಯ ಸಹಕಾರ ಬೇಕಾಗುತ್ತದೆ. ಹೀಗಾಗಿ ಅಧಿಕಾರಿಗಳ ಸಭೆ ನಂತರ ಖಾಸಗೀಕರಣದ ರೂಪುರೇಷೆ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಎಂಪಿಎಂ ವ್ಯಾಪ್ತಿಯಲ್ಲಿ ಸುಮಾರು 23 ಸಾವಿರ ಹೆಕ್ಟೇರ್ ಅರಣ್ಯ ಮತ್ತು ಅರಣ್ಯೇತರ ಭೂಮಿ ಇದ್ದು ಇಲ್ಲಿ ಸದ್ಯಕ್ಕೆ ಅಕೇಶಿಯಾ, ನೀಲಗಿರಿ ಮತ್ತು ಬಿದಿರನ್ನು ಬೆಳೆಯಲಾಗುತ್ತಿದೆ. ಒಂದು ವೇಳೆ ಕಾರ್ಖಾನೆಯನ್ನು ಗುತ್ತಿಗೆ ನೀಡಿದರೂ, ಕಾರ್ಖಾನೆ ಜಾಗದಲ್ಲಿ ನಿಷೇಧಿಸಿರುವ ನೀಲಗಿರಿ ಬೆಳೆಯಲು ಅವಕಾಶ ನೀಡಬಹುದೇ ಎಂಬುದನ್ನೂ ಕೂಲಂಕಶವಾಗಿ ಪರಿಶೀಲಿಸಬೇಕು ಎಂದು ಅವರು ವಿವರಿಸಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಶಿವಮೊಗ್ಗ ಜಿಲ್ಲಾಧಿಕಾರಿ ಮತ್ತು ಎಂಪಿಎಂ ವ್ಯವಸ್ಥಾಪಕ ನಿರ್ದೇಶಕ ಸೆಲ್ವಮಣಿ, ಎಪಿಸಿಸಿಎಫ್ ವನಶ್ರೀ ವಿಪಿನ್ ಸಿಂಗ್, ಚೀಫ್ ಆಪರೇಟಿಂಗ್ ಆಫೀಸರ್ ರವೀಂದ್ರನಾಥ್ ಮುಂತಾದವರು ಭಾಗವಹಿಸಿದ್ದರು.
ಎಂಪಿಎಂನ ಕೆಲವು ಉದ್ಯೋಗಿಗಳಿಗೆ ಸರ್ಕಾರದ ವಿವಿಧ ಸಂಸ್ಥೆ/ನಿಗಮಗಳಲ್ಲಿ ನೌಕರಿ ಕೊಡಿಸುವ ಕೆಲಸವೂ ಆಗುತ್ತಿದೆ. ಕೆಲವರಿಗೆ ಸ್ವಯಂ ನಿವೃತ್ತಿ ನೀಡಲಾಗಿದೆ. ಜತೆಗೆ ತಾತ್ಕಾಲಿಕ ಆಧಾರದಲ್ಲಿ ಕೆಲಸ ಮಾಡುತ್ತಿರುವ 250 ಫಾರೆಸ್ಟ್ ವಾಚರ್‌ಗಳ ವೇತನ ಏರಿಕೆಗೂ ಒಂದು ಪರಿಹಾರ ರೂಪಿಸಬೇಕು ಎಂದು ಎಂ.ಬಿ.ಪಾಟೀಲ್ ಅಧಿಕಾರಿಗಳಿಗೆ ನಿರ್ದೇಶಿಸಿದರು.