ಜಿಲ್ಲೆ

ದಕ್ಷಿಣ ಕನ್ನಡದಲ್ಲಿ ಆ್ಯಂಟಿ ಕಮ್ಯುನಲ್ ಫೋರ್ಸ್ ರಚನೆ

ಶಿವಮೊಗ್ಗ: ದಕ್ಷಿಣ ಕನ್ನಡದಲ್ಲಿ ಆ್ಯಂಟಿ ಕಮ್ಯುನಲ್ ಫೋರ್ಸ್ ರಚನೆ ಮಾಡಲಾಗುತ್ತಿದೆ. ಸಮಾಜವನ್ನು ಒಡೆಯುವುದಕ್ಕೆ ಕೋಮುವಾದವೇ ಕಾರಣ. ಅದರ ವಿರುದ್ಧ ಕಾನೂನಾತ್ಮಕ ಹಾಗೂ ಸಮಾಜ ಪರಿವರ್ತನಾ ಕಾರ್ಯ ಮಾಡಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆದ ಪ್ರಕರಣಗಳಲ್ಲಿ ಪೊಲೀಸರ ವೈಫಲ್ಯವಿಲ್ಲ. ಪ್ರಚೋದನೆಯ ಭಾಷಣಗಳಿಂದ ಇಂತಹ ಘಟನೆ ನಡೆಯುತ್ತಿವೆ. ಅಂಥವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸಂಘ ಪರಿವಾರದವರು ಇದರಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿದ್ದಾರೆ. ಹಾಗಾಗಿ ಕಾನೂನಾತ್ಮಕ ಹೋರಾಟ ಹಾಗೂ ಪರಿವರ್ತನೆ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಪ್ರಚೋದನೆ ಮಾಡುವವರು ಹಿಂದುತ್ವದ ಹೆಸರೇಳಿಕೊಂಡು ಏನು ಬೇಕಾದರೂ ಮಾಡಬಹುದು ಅಂದುಕೊಂಡಿದ್ದಾರೆ. ಮಂಗಳೂರಿನಲ್ಲಿ ಇಂತಹ ಘಟನೆ ನಡೆದರೆ ಯಾರೂ ಬಂಡವಾಳ ಹೂಡಿಕೆಗೆ ಮುಂದೆ ಬರಲ್ಲ. ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು.

ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ಈಗಾಗಲೇ ಆರೋಪಿಗಳನ್ನು ಬಂಧಿಸಿದ್ದೇವೆ. ಅಲ್ಲದೆ, ಈ ಹಿಂದೆ ಅಶ್ರಫ್ ಎಂಬಾತನನ್ನು ಕೊಂದಿದ್ದರು. ಈಗಿನ ಪ್ರಕರಣದಲ್ಲೂ ಆರೋಪಿಗಳನ್ನು ಬಂಧಿಸುತ್ತೇವೆ. ಇಂತಹ ಪ್ರಕರಣಗಳಲ್ಲಿ ಜಾತಿ, ಧರ್ಮ ನೋಡಲು ಬರುವುದಿಲ್ಲ. ಸುಹಾಸ್ ಶೆಟ್ಟಿ ರೌಡಿಶೀಟರ್ ಆಗಿದ್ದ. ನಮ್ಮಲ್ಲಿ ಭೇದ-ಭಾವ ಏನಿಲ್ಲ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.