ಜಿಲ್ಲೆ

ಕರಾವಳಿಯಲ್ಲಿ ಕೋಮು ನಿಗ್ರಹ ಪಡೆ ರಚನೆ - ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆ

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷ ಮರುಕಳಿಸದಂತೆ ತಡೆಯುವ ಉದ್ದೇಶದಿಂದ ನೂತನವಾಗಿ ಕೋಮು ನಿಗ್ರಹ ಪಡೆ ರಚಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಕ್ಸಲ್ ನಿಗ್ರಹ ಪಡೆ ಮಾದರಿಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಐಜಿಪಿ ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ಕೋಮು ನಿಗ್ರಹ ಪಡೆ ರಚಿಸಿ, ಕರಾವಳಿಯಲ್ಲಿ ಶಾಂತಿ, ಸಾಮರಸ್ಯ ಕಾಯ್ದುಕೊಳ್ಳಲು ಒತ್ತು ನೀಡಲಾಗುವುದು ಎಂದರು.

ಕೋಮುವಾದಕ್ಕೆ ಹಿಂದಿನಿಂದ ಯಾರೆಲ್ಲಾ ಸಹಕಾರ, ಪ್ರೋತ್ಸಾಹ ನೀಡುತ್ತಾರೆ. ನೇರವಾಗಿ ಯಾರು ಭಾಗಿಯಾಗುತ್ತಾರೆ. ಯಾವ ರೀತಿಯಲ್ಲಿ ಸಂಚು ನಡೆಯುತ್ತದೆ ಮೊದಲಾದುವುಗಳ ಮೇಲೆ ನಿಗಾ ಇಡಲಿದ್ದಾರೆ. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಎಲ್ಲಾ ರೀತಿಯ ಅಧಿಕಾರ ನೀಡಲಾಗುವುದು ಎಂದರು.

*ದುಷ್ಟ ಶಕ್ತಿಗಳ ಕೈವಾಡ: ಕೋಮು ಸಂಘರ್ಷದ ಹಿನ್ನೆಲೆಯಲ್ಲಿ ಹಲವು ಬಾರಿ ರಾಜ್ಯ, ರಾಷ್ಟ್ರದ ಗಮನ ಸೆಳೆದಿದೆ. ಈ ಬಾರಿ ಮತ್ತೆ ಮರುಕಳಿಸಿದೆ. ಇಂತಹ ದುರ್ಘಟನೆಗಳ ಹಿಂದೆ ದುಷ್ಟ ಶಕ್ತಿಗಳ ಕೈವಾಡವಿದೆ. ಇಲ್ಲಿ ಯಾವುದೇ ಕಾರಣಕ್ಕೂ ಸಮಾಜದ ಶಾಂತಿ ಹಾಳು ಮಾಡಲು ಬಿಡುವುದಿಲ್ಲ. ಯಾವುದೇ ಸಮುದಾಯ, ಯಾವುದೇ ಪಕ್ಷದವರಾದರೂ ಕಾನೂನು ಉಲ್ಲಂಘಿಸಲು ಬಿಡುವುದಿಲ್ಲ. ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲೆ ಶಾಂತಿಯಿಂದ ಇರಬೇಕು ಎನ್ನುವುದು ಸರ್ಕಾರದ ಉದ್ದೇಶ. ಕಾಂಗ್ರೆಸ್‌ನಿಂದ ಹಿಂದೆ ಶಾಂತಿ ಸ್ಥಾಪನೆಗಾಗಿ ಪಾದಯಾತ್ರೆ ಮಾಡಿದ್ದೆವು. ಆ ಬಳಿಕ ಒಂದಷ್ಟು ಸಮಯ ಯಾವುದೇ ಘಟನೆಗಳು ಸಂಭವಿಸಿರಲಿಲ್ಲ. ಈಗ ಮತ್ತೆ ಮರುಳಿಸಿದೆ. ಇದಕ್ಕೆ ದುಷ್ಟ ಶಕ್ತಿಗಳು ಕಾರಣ. ಅಂತಹ ದುಷ್ಟರ ಹುಟ್ಟಡಗಿಸಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ಡಾ.ಪರಮೇಶ್ವರ್ ಹೇಳಿದರು.

ಪ್ರಚೋದನೆ ವಿರುದ್ಧ ತಕ್ಷಣ ಕ್ರಮ: ಪ್ರಚೋದನಾಕಾರಿ ಹೇಳಿಕೆ, ಭಾಷಣ ಮಾಡುವವರ ಮೇಲೆ ಯಾವುದೇ ಪಕ್ಷ, ಎಷ್ಟೇ ದೊಡ್ಡ ಹುದ್ದೆ, ಅಧಿಕಾರದಲ್ಲಿದ್ದರೂ ಅವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಯಾರು ಕೂಡಾ ಪ್ರಚೋದನಕಾರಿಯಾಗಿ ಹೇಳಿಕೆ ನೀಡಬಾರದು. ರಾಜ್ಯದಲ್ಲಿ ನಡೆದ ಕೊಲೆ ಪ್ರಕರಣಗಳಲ್ಲಿ ಶೇ.99ರಷ್ಟು ಆರೋಪಿಗಳ ಬಂಧನ ಆಗಿದೆ. ನಾವು ಕೆಲಸದಿಂದ ಉತ್ತರ ನೀಡುತ್ತೇವೆ ಎಂದು ಗೃಹ ಸಚಿವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಎಡಿಜಿಪಿ ಆರ್.ಹಿತೇಂದ, ಕಮಿಷನರ್ ಅನುಪಮ್ ಅಗ್ರವಾಲ್, ಡಿಐಜಿಪಿ ಅಮಿತ್ ಸಿಂಗ್ ಉಪಸ್ಥಿತರಿದ್ದರು.

ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ ಪ್ರಚೋದನಾಕಾರಿ ಭಾಷಣ, ಹೇಳಿಕೆ ಕಾರಣ. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಮಕ್ಕಳು ಶಿಕ್ಷಣ ಪಡೆಯಬೇಕು. ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿಯ ಕಡೆಗೆ ಸರ್ಕಾರ ಒತ್ತು ನೀಡುತ್ತಿದೆ.

ಡಾ.ಜಿ.ಪರಮೇಶ್ವರ್

ಗೃಹ ಸಚಿವರು