ಎಚ್.ಡಿ. ಕೋಟೆ ತಾಲೂಕಿನಲ್ಲಿ ಇದುವರೆಗೂ 2,825 ಸ್ವ-ಸಹಾಯ ಸಂಘಗಳನ್ನು ರಚನೆ ಮಾಡಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತ್ತಾಯ ಮಾಹಿತಿ ತಿಳಿಸಿದರು. 
ಜಿಲ್ಲೆ

ಎಚ್.ಡಿ.ಕೋಟೆ ತಾಲೂಕಿನಲ್ಲಿ 2,825 ಸಂಘ ರಚನೆ

ಎಚ್.ಡಿ. ಕೋಟೆ: ತಾಲೂಕಿನಲ್ಲಿ ಇದುವರೆಗೂ 2,825 ಸ್ವ-ಸಹಾಯ ಸಂಘಗಳನ್ನು ರಚನೆ ಮಾಡಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತ್ತಾಯ ಮಾಹಿತಿ ತಿಳಿಸಿದರು.


ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ 2,825 ಸ್ವ-ಸಹಾಯ ಸಂಘಗಳಿಂದ ಸುಮಾರು 24,532 ಸದಸ್ಯರಿದ್ದಾರೆ. ಕಳೆದ 12 ವರ್ಷಗಳಲ್ಲಿ ಈ ಸದಸ್ಯರಿಂದ 17.10 ಕೋಟಿ ರೂ. ಹಣ ಉಳಿತಾಯ ಮಾಡಲಾಗಿದ್ದು, ಎಸ್‌ಬಿಐ ಶಾಖೆಗಳಲ್ಲಿ ಜಮಾ ಮಾಡಲಾಗಿದೆ ಎಂದು ತಿಳಿಸಿದರು.


ಸ್ವ-ಸಹಾಯ ಸಂಘದ ಸದಸ್ಯರ ಕೃಷಿ ಅಭಿವೃದ್ಧಿ, ಹೈನುಗಾರಿಕೆ ಸ್ವ-ಉದ್ಯೋಗ ಹಾಗೂ ಮೂಲಸೌಕರ್ಯಕ್ಕೆ ಬೇಕಾದ ಆರ್ಥಿಕ ಅವಶ್ಯಕತೆ ಪೂರೈಸಲು ಬ್ಯಾಂಕ್‌ಗಳಿಂದ ನೇರ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಮನೆಬಾಗಿಲಿಗೆ ಸುಲಭ ರೀತಿಯಲ್ಲಿ ತಲುಪಿಸಲಾಗಿದೆ. ಪ್ರಸ್ತುತ ವರ್ಷದಲ್ಲಿ ರಾಷ್ಟ್ರೀಕೃತ ಸ್ಟೇಟ್ ಬ್ಯಾಂಕ್‌ನಿಂದ ಸುಮಾರು 121.83 ಕೋಟಿ ರೂ. ಪ್ರಗತಿ ನಿಧಿಯಾಗಿ ಆರ್ಥಿಕ ನೆರವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.


ಪ್ರಾಕೃತಿಕ ವಿಕೋಪದಿಂದ ಮಳೆ ಕೊರತೆ ಉಂಟಾಗಿದ್ದು, ವರ್ಷಗಳು ಕಳೆದಂತೆ ಅಂತರ್ಜಲ ಮಟ್ಟದ ಕುಸಿತ ಮನಗಂಡು ಗ್ರಾಮ ಪಂಚಾಯಿತಿ ಸಹಭಾಗಿತ್ವದೊಂದಿಗೆ ಕೆರೆಗಳ ಹೂಳೆತ್ತುವ ಯೋಜನೆ ಹಮ್ಮಿಕೊಳ್ಳಲಾಗಿದೆ. ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಇದುವರೆಗೂ ತಾಲೂಕಿನಲ್ಲಿ ಮೂರು ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ವರ್ಷದಲ್ಲಿ ಎರಡು ಕೆರೆಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.


ತಾಲೂಕಿನಲ್ಲಿ ಒಟ್ಟು 235 ಅಂಗವಿಕಲರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಸ್ವ-ಸಹಾಯ ಸಂಘಗಳ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ, ತಾಲೂಕು ಯೋಜನಾಧಿಕಾರಿ ವಿ.ಭಾಸ್ಕರ್ ಇದ್ದರು.