ಜಿಲ್ಲೆ

ವಾರ್ಡ್ ಸಮಿತಿಗಾಗಿ ಮೂರು ವಾರ ಗಡವು, ಬಳಗದ ಸದಸ್ಯ ಶಿವಶಂಕರ ಐಹೊಳೆ ಎಚ್ಚರಿಕೆ

Dharwada - Basavaraj Idli

ಹುಬ್ಬಳ್ಳಿ: ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕಳೆದ ವರ್ಷವೇ ಚರ್ಚಿಸಿ ಆದೇಶ ನೀಡಲಾಗಿದ್ದರೂ ವಾರ್ಡ್ ಸಮಿತಿ ರಚನೆಯಾಗಿಲ್ಲ. ಮೂರು ವಾರದಲ್ಲಿ ವಾರ್ಡ್ ಸಮಿತಿ ಸದಸ್ಯರ ಹೆಸರು ಘೋಷಣೆಯಾಗದಿದ್ದರೆ ಮಹಾನಗರ ಪಾಲಿಕೆ ಆಯುಕ್ತರು, ಮೇಯರ್ ಕಚೇರಿ ಎದುರು ನಿರಂತರ ಧರಣಿ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ವಾರ್ಡ್ ಸಮಿತಿ ಬಳಗದ ಸದಸ್ಯ ಶಿವಶಂಕರ ಐಹೊಳೆ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆಗಸ್ಟ್ ನಲ್ಲಿ ಮೇಯರ್ ಅವರು ಆದೇಶ ಮಾಡಿದ್ದಾರೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ನಾಲ್ಕು ಬಾರಿ ಮನವಿ ಸಲ್ಲಿಸಲಾಗಿದೆ. ಇಷ್ಟಾದರೂ ಪಾಲಿಕೆ ಆಯುಕ್ತರು ಈ ವಿಷಯದಲ್ಲಿ ಮುತುವರ್ಜಿ ವಹಿಸಿ ವಾರ್ಡ್ ಸಮಿತಿ ರಚನೆ ಮಾಡುತ್ತಿಲ್ಲ ಎಂದು ದೂರಿದರು.

ಹುಬ್ಬಳ್ಳಿ ಧಾರವಾಡದ 82 ವಾರ್ಡ್ ಗಳಿಗೆ ಸುಮಾರು 1048 ಅಜಿರ್ಗಳು ಬಂದಿವೆ. ಕೆಲವು ವಾರ್ಡ್ ಗಳಿಗೆ ನಿರೀಕ್ಷಿತ ಅರ್ಜಿ ಬಂದಿಲ್ಲ ಎಂಬ ಮಾಹಿತಿ ಇದೆ. ಯಾವ ವಾರ್ಡಿನಲ್ಲಿ ಸಮರ್ಪಕ ಅರ್ಜಿ ಬಂದಿವೆಯೋ ಅಲ್ಲಿ ಸಮಿತಿ ರಚಿಸಬೇಕು. ಉಳಿದ ಕಡೆಯ ಮಾಹಿತಿಯನ್ನು ತಮಗೆ ನೀಡಿದರೆ ಸಮಿತಿ ರಚನೆಗೆ ಇರುವ ತೊಡಕು ನಿವಾರಣೆಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಮಂಗಳೂರು, ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದಲ್ಲಿ ವಾರ್ಡ್ ಸಮಿತಿಯ 10 ಸದಸ್ಯರ ಪೈಕಿ ಐವರು ಇದ್ದರೂ ಆಯಾ ಭಾಗದ ಸಮಸ್ಯೆಗಳ ಚರ್ಚೆ ನಡೆಸಲು ವಾರ್ಡ್ ಸಮಿತಿ ಸಭೆ ಸೇರುತ್ತಿದ್ದಾರೆ. ಅಭಿವೃದ್ಧಿಗೆ ಅಗತ್ಯ ಸಲಹೆ ಸೂಚನೆ ನೀಡುತ್ತಿದ್ದಾರೆ. ಉತ್ತರ ಕರ್ನಾಟಕದ ಬಹುದೊಡ್ಡ ನಗರ ಹುಬ್ಬಳ್ಳಿ ಧಾರವಾಡದಲ್ಲಿ ಮಾತ್ರ ವಾರ್ಡ್ ಸಮಿತಿ ರಚನೆಗೆ ಅನಾದರ ತೋರಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನುಡಿದಂತೆ ನಡೆಯುವ ಸರ್ಕಾರ ಎಂದು ಹೇಳಿಕೊಳ್ಳುವ ರಾಜ್ಯ ಸರ್ಕಾರ ಈ ವಿಚಾರದಲ್ಲಿ ಹಿಂದೆ ಬಿದ್ದಿದೆ. ಕೂಡಲೇ ವಾರ್ಡ್ ಸಮಿತಿ ರಚನೆ ಮಾಡಿ ಜನರ ಮನೆ ಬಾಗಿಲಿಗೆ ಸರ್ಕಾರ ಎಂಬ ಮಾತನ್ನು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಬಳಗದ ಮೃತ್ಯುಂಜಯ ಕೊಲ್ಲಾಪುರ, ಪರಶುರಾಮ ಕೆಂಗಾರ, ಎಸ್.ಬಿ. ಸಜ್ಜನರ, ಅನ್ನಪೂರ್ಣ ಅಂಗಡಿ, ಶಿವಾನಂದ ಬೆಳವಟಗಿ ಇದ್ದರು.