ಮೈಸೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿ ನೀರನ್ನು ಸರಬರಾಜು ಮಾಡುವ ಮುನ್ನ ಪ್ರತಿ ನೀರಿನ ಮೂಲ, ನೀರಿನ ಸಂಗ್ರಹಣೆ ಹಾಗೂ ನೀರು ಪೂರೈಕೆ ಮಾಡುವ ಸ್ಥಳಕ್ಕೆ ಅಧಿಕಾರಿಗಳ ತಂಡ ರಚಿಸಿ ಖುದ್ದಾಗಿ ಭೇಟಿ ನೀಡಿ ನೀರಿನ ಗುಣಮಟ್ಟವನ್ನು ಪರಿಶೀಲಿಸಿ ವರದಿ ನೀಡಬೇಕು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿಯ ಮಿನಿ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಕುಡಿಯುವ ನೀರು ಪೂರೈಕೆ ಸಂಬಂಧ ಸಭೆ ನಡೆಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿನ ಕುಡಿಯುವ ನೀರಿನ ಪೈಪುಗಳು ರಸ್ತೆ, ಚರಂಡಿಗಳ ಮೂಲಕ ಹಾದು ಹೊಗಿ ಒಡೆದಿದ್ದರೆ, ತಕ್ಷಣ ಸರಿಪಡಿಸಿ, ಇಲ್ಲದಿದ್ದರೆ ಒಡೆದ ಪೈಪ್‌ನಿಂದ ಸೋರಿಕೆಯಾದ ನೀರು ಕಲುಷಿತ ನೀರಿನೊಂದಿಗೆ ಬೆರೆಯುವ ಸಂಭವವಿರುವುದರಿಂದ ಇದರ ಬಗ್ಗೆ ಮುನ್ನಚ್ಚರಿಕೆ ವಹಿಸಿ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಗ್ರಾಮದ ಸ್ವಚ್ಛತೆ, ಚರಂಡಿ ಸ್ವಚ್ಛತೆ, ತೊಂಬೆ ಹಾಗೂ ಬೋರ್ವೆಲ್ ಗಳ ಸ್ವಚ್ಛತೆ ಬಗ್ಗೆ ಅಧಿಕಾರಿಗಳು ಅಗತ್ಯವಾಗಿ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿರುವ ನೀರಿನ ಮೂಲಗಳ ದುರಸ್ಥಿ ಕೈಗೊಂಡು ಕಲುಷಿತ ನೀರು ಸೇರ್ಪಡೆಯಾಗದಂತೆ ಕ್ರಮವಹಿಸಬೇಕು. ಎಫ್‌ಟಿಕೆ ಟೆಸ್ಟ್ ಮೂಲಕ ಪ್ರತಿ ನೀರಿನ ಮೂಲಗಳ ಟೆಸ್ಟ್ ಮಾಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.