ಜಿಲ್ಲೆ

ಫುಟ್‌ಪಾತ್ ಅಭಿವೃದ್ಧಿ, ನಿರ್ವಹಣೆಗೆ ತಂಡ ರಚಿಸಿ: ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆ

ಬೆಂಗಳೂರು: ಮಹಾನಗರದಲ್ಲಿ ಪಾದಚಾರಿ ಮಾರ್ಗಗಳನ್ನು ಜನಸ್ನೇಹಿ ರೀತಿ ಕಾಯ್ದುಕೊಳ್ಳಲು ಫುಟ್‌ಪಾತ್ ಅಭಿವೃದ್ಧಿ/ನಿರ್ವಹಣೆಗಾಗಿಯೇ ಪ್ರತ್ಯೇಕ ತಂಡ ರಚಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಹದೇವಪುರ ವಲಯ ವ್ಯಾಪ್ತಿಯ ಸೀತಾರಾಮ್ ಪಾಳ್ಯ ಮೆಟ್ರೋ ನಿಲ್ದಾಣದಿಂದ ಬಿಇಎಂಎಲ್ ಲೇಔಟ್ ಮುಖ್ಯರಸ್ತೆವರೆಗಿನ 3.5 ಕಿ.ಮೀ. ಉದ್ದಕ್ಕೂ ವಿವಿಧ ಸ್ಥಳಗಳನ್ನು ಶನಿವಾರ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.

ಬಿಬಿಎಂಪಿಯಲ್ಲಿನ ರಸ್ತೆ ಮೂಲಸೌಕರ್ಯ ವಿಭಾಗ, ಟ್ರಾಫಿಕ್ ಇಂಜಿನಿಯರಿಂಗ್ ಸೆಲ್, ಒಎಫ್​ಸಿ ಮತ್ತು ವಿದ್ಯುತ್ ವಿಭಾಗಗಳು ಒಟ್ಟಾಗಿ ಸಮಗ್ರ ಸಂಚಾರ ಇಲಾಖೆಯಾಗಿ ಏಕೀಕರಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು. ಈ ವಿಭಾಗಕ್ಕೆ ಸ್ವಂತ ಸಾರಿಗೆ ಯೋಜಕರು ಮತ್ತು ನಗರ ವಿನ್ಯಾಸಕಾರರನ್ನು ನೇಮಿಸಿಕೊಂಡು ರಸ್ತೆ ಹಾಗೂ ಪಾದಚಾರಿ ಪಥಗಳ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಪ್ರತ್ಯೇಕ ತಂಡವನ್ನು ರಚಿಸಲು ಅಧಿಕಾರಿಗಳು ಕಾಯೋನ್ಮುಖರಾಗಬೇಕು ಎಂದು ಸೂಚಿಸಿದರು.

ಖಾಸಗಿ ಸಂಸ್ಥೆ, ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್ ಹಾಗೂ ಇತರ ಖಾಸಗಿ ಕಂಪನಿಗಳು ತಮ್ಮ ಆವರಣದ ಮುಂಭಾಗದಲ್ಲಿರುವ ಪಾದಾಚಾರಿ ಮಾರ್ಗಗಳನ್ನು ಸ್ವಯಂಪ್ರೇರಿತವಾಗಿ ಅಭಿವೃದ್ಧಿಪಡಿಸಿ ನಿರ್ವಹಿಸಬಹುದಾಗಿದೆ. ಇದನ್ನು ಕಾರ್ಯರೂಪಕ್ಕೆ ತರುವ ಸಂಬಂಧ ಆಯಾ ವಲಯಗಳ ಅಧಿಕಾರಿಗಳು ಆದೇಶ ಹೊರಡಿಸಲು ಕ್ರಮವಹಿಸಬೇಕು ಎಂದು ನಿರ್ದೇಶಿಸಿದರು.

ತ್ವರಿತ ತೆರವಿಗೆ ಸೂಚನೆ:

ಐಟಿಪಿಎಲ್ ಮುಖ್ಯರಸ್ತೆಯಲ್ಲಿ ರಸ್ತೆಗೆ ಮರ ಬಾಗಿಕೊಂಡಿರುವುದರಿಂದ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಬಿಳುವ ಹಂತದ ಮರವನ್ನು ತೆರವುಗೊಳಿಸಬೇಕು. ಇದೇ ರೀತಿ ಬೇರೆ ಅಪಾಯಕಾರಿ/ಒಣಗಿದ ಮರ-ಕೊಂಬೆಗಳನ್ನೂ ತೆಗೆದುಹಾಕಬೇಕು. ಐಟಿಪಿಎಲ್ ಮುಖ್ಯರಸ್ತೆಯ ಶಿವಶಕ್ತಿ ಬಾರ್‌ನವರು ಮದ್ಯದ ಬಾಟಲ್ ಹಾಗೂ ಪ್ಲಾಸ್ಟಿಕ್ ಬಾಟಲ್ಗಳನ್ನು ರಸ್ತೆಗೆ ಎಸೆದಿದ್ದು, ಅದನ್ನು ತೆರವುಗೊಳಿಸಲು ಹಾಗೂ ಬಾರ್‌ನವರಿಗೆ ದಂಡ ವಿಧಿಸಲು ಸೂಚಿಸಲಾಯಿತು.

ರಸ್ತೆಗೆ ಅಡ್ಡಲಾಗಿ ಕಾಂಕ್ರೀಟ್ ಮಿಡಿಯನ್ ಬ್ಯಾರಿಯರ್‌ಗಳನ್ನು ಹಾಕಿದ್ದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿರುವುದರ ಜತೆಗೆ ರಸ್ತೆಯಲ್ಲಿ ವಾಹನಗಳನ್ನು ಅನಧಿಕೃತವಾಗಿ ಪಾರ್ಕಿಂಗ್ ಮಾಡಲಾಗುತ್ತಿದೆ. ಕೂಡಲೇ ಅವುಗಳನ್ನು ತೆರವುಗೊಳಿಸಲು ಮುಖ್ಯ ಆಯುಕ್ತರು ವಲಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈ ವೇಳೆ ವಲಯ ಆಯುಕ್ತ ರಮೇಶ್, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಉಪಸ್ಥಿತರಿದ್ದರು.

ಗೇಟುಗಳು ಒಳಭಾಗಕ್ಕೆ ತೆರೆಯುವಂತಿರಲಿ:

ರಸ್ತೆ ಬದಿಯಿರುವ ಎಲ್ಲ ಮನೆಗಳ ಮುಂಭಾಗದ ಗೇಟುಗಳು ಒಳಭಾಗಕ್ಕೆ ತೆರೆಯುವಂತಿರಬೇಕು. ಫುಟ್‌ಪಾತ್ ಮೇಲೆ ಹೊರಗೆ ತೆರೆಯುವಂತಹ ಗೇಟುಗಳನ್ನು ಅಳವಡಿಸಿದವರಿಗೆ ದಂಡ ವಿಧಿಸಬೇಕು. ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರುವ ಉದ್ದೇಶದಿಂದ ಎಲ್ಲ ಆವರಣದ ಗೇಟುಗಳ ಸಮಗ್ರ ಪರಿಶೀಲನೆ ನಡೆಸುವಂತೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಆದೇಶಿಸಿದರು.