ಹನೂರಿನಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಚಂಗಡಿ ಕರಿಯಪ್ಪ, ಮಾದಪ್ಪ, ರಾಜು, ಜಗದೀಶ್ ಇತರರು ಇದ್ದರು.  
ಜಿಲ್ಲೆ

ಹನೂರಿನಲ್ಲಿ ಮಾನವ ಸರಪಳಿ ರಚಿಸಿ ಆಕ್ರೋಶ

ಹನೂರು: ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಸಂಬಂಧ ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದ ಮನವಿ ಪತ್ರವನ್ನು ಬಿಸಾಡಿರುವುದನ್ನು ಖಂಡಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ಪದಾಧಿಕಾರಿಗಳು ಮಂಗಳವಾರ ಹನೂರಿನಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಪಟ್ಟಣದ ರಾಮಾಪುರ-ಎಲ್ಲೇಮಾಳ ವಿಭಜಕ ರಸ್ತೆಯಿಂದ ಹೊರಟ ಪ್ರತಿಭಟನಾಕಾರರು ಸಿದ್ದರಾಮಯ್ಯ ನಡೆ ವಿರುದ್ಧ ಘೋಷಣೆ ಕೂಗುತ್ತಾ ಖಾಸಗಿ ಬಸ್ ನಿಲ್ದಾಣದ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ಚಾ.ನಗರದಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿವಿಧ ರೈತಪರ ಸಂಘಟನೆಯಿಂದ ಮಾನವ- ವನ್ಯಜೀವಿ ಸಂಘರ್ಷ ತಡೆಗಟ್ಟುವಿಕೆ, ಬೆಳೆನಷ್ಟಕ್ಕೆ ಪರಿಹಾರ, ವಿದ್ಯುತ್ ಬಾಕಿ ಮನ್ನಾ, ಚಂಗಡಿ ಗ್ರಾಮ ಸ್ಥಳಾಂತರ, ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಕರ್ಯ, ರಸ್ತೆ ಅಭಿವೃದ್ಧಿ, ಸೇತುವೆ ನಿರ್ಮಾಣ ಸೇರಿದಂತೆ ಇತರ ಬೇಡಿಕೆ ಈಡೇರಿಸುವ ಸಂಬಂಧ ಮನವಿ ಪತ್ರವನ್ನು ಸಲ್ಲಿಸಲಾಗಿತ್ತು. ಆದರೆ ಅವುಗಳನ್ನು ಬಿಸಾಡಿರುವುದು ಎಷ್ಟರ ಮಟ್ಟಿಗೆ ಸರಿ? ಇದರಿಂದ ರೈತರ ಮನವಿಗೆ ಬೆಲೆ ಇಲ್ಲದಂತಾಗಿದ್ದು, ಅವಮಾನಿಸಲಾಗಿದೆ. ಆದ್ದರಿಂದ ಸಿದ್ದರಾಮಯ್ಯ ಅವರು ಈ ಕೂಡಲೇ ಎಚ್ಚೆತ್ತು ರೈತರಿಗೆ ಕ್ಷಮೆ ಕೇಳಬೇಕು ಎಂದರು.

ಮನವಿ ಪತ್ರದಲ್ಲಿನ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಿಎಂ ಜಿಲ್ಲೆಗೆ ಆಗಮಿಸಿದರೆ ರೈತ ಸಂಘಟನೆ ಜತೆಗೂಡಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೆಸ್ಕ್ ಕಚೇರಿಗೆ ಭೇಟಿ: ಪ್ರತಿಭಟನೆ ಬಳಿಕ ರೈತರು ಪಟ್ಟಣದ ಸೆಸ್ಕ್ ಕಚೇರಿಗೆ ತೆರಳಿ ತೋಟದ ಮನೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡದಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಎಇಇ ಶಂಕರ್ ಮಾತನಾಡಿ, ರೈತರ ಬೇಡಿಕೆ ಸಂಬಂಧ ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಈ ಸಂಬಂಧ ಅಗತ್ಯ ಭರವಸೆ ನೀಡಿದ್ದಾರೆ. ಆದ್ದರಿಂದ ಒಂದು ವಾರ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

ರೈತ ಮುಖಂಡರಾದ ಮಾದಪ್ಪ, ಭೈರನತ್ತ ರಾಜು, ಶಾಂತಕುಮಾರ್, ಬಾಲು, ಜಗದೀಶ್, ಶಿವಮೂರ್ತಿ ಇತರರು ಇದ್ದರು.