ಚನ್ನಪಟ್ಟಣ : ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಂತೆಮೊಗೇನಹಳ್ಳಿ ಕೆರೆಯಲ್ಲಿ ಎರಡು ಕಾಡಾನೆಗಳ ಬೀಡುಬಿಟ್ಟಿವೆ.
ಕಾಡಂಚಿನ ಗ್ರಾಮಗಳಿಗೆ ಸೀಮಿತವಾಗಿದ್ದ ಆನೆ ದಾಳಿ ಇತ್ತೀಚಿಗೆ ನಗರ ಮತ್ತು ಗ್ರಾಮೀಣ ಭಾಗಕ್ಕೆ ವ್ಯಾಪಿಸಿದೆ.
ಕಳೆದ ಶನಿವಾರ ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಇದೇ ಆನೆಗಳು ದಾಳಿ ಮಾಡಿದ್ದವು. ಆ ನಂತರ ಅವು ಅದೇ ಜಾಡಿನಲ್ಲಿ ಸಾಗಿ ಮದ್ದೂರು ಸಮೀಪ ಕಾಣಿಸಿಕೊಂಡಿದ್ದವು. ಅಲ್ಲಿಂದ ಆನೆಗಳನ್ನು ಸೋಮವಾರ ರಾತ್ರಿ ಅರಣ್ಯಾಧಿಕಾರಿಗಳು ಚನ್ನಪಟ್ಟಣ ಅರಣ್ಯ ಪ್ರದೇಶಕ್ಕೆ ಹಿಮ್ಮಟಿಸಿದ್ದರು.
ಅಲ್ಲಿಂದ ಚನ್ನಪಟ್ಟಣ ವಲಯ ಅರಣ್ಯಾಧಿಕಾರಿಗಳು ಕಬ್ಬಾಳು ಅರಣ್ಯ ಪ್ರದೇಶಕ್ಕೆ ಆನೆಗಳನ್ನು ಡ್ರೈವ್ ಮಾಡುವ ವೇಳೆ ಸಂತೆಮೊಗೇನಹಳ್ಳಿ ಕೆರೆಯಲ್ಲಿ ಆನೆಗಳು ಬೀಡುಬಿಟ್ಟಿವೆ. ಕೆರೆಯಲ್ಲಿರೋ ಕಾಡಾನೆಗಳನ್ನು ನೋಡಲು ಜನರು ಮುಗಿಬಿದ್ದಿದ್ದರು. ಕೆರೆ ಹೆದ್ದಾರಿ ಬದಿಯಲ್ಲಿರುವ ಕಾರಣ ರಸ್ತೆಯಲ್ಲಿ ಹೋಗುವವರು, ಬರುವವರೆಲ್ಲಾ ನಿಂತು ನೋಡುತ್ತಿದ್ದು, ಕೆಲವರು ಆನೆಗಳ ಚಿತ್ರ, ವಿಡಿಯೋ ತೆಗೆಯುವುದು ಸಾಮಾನ್ಯವಾಗಿತ್ತು.
ಹಗಲು ವೇಳೆಯಲ್ಲಿ ಆನೆಗಳನ್ನು ಹಿಮ್ಮಟಿಸಿದಲ್ಲಿ ಆನೆಗಳು ಗ್ರಾಮಗಳಿಗೆ ನುಗ್ಗುವ ಅಪಾಯವಿರುವ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸಂಜೆವರೆಗೂ ಕಾಡಾನೆಗಳು ಕೆರೆ ಬಿಟ್ಟು ಹೋಗದಂತೆ ಎಚ್ಚರವಹಿಸಿದ್ದು, ಸಂಜೆ ಬಳಿಕ ಕಬ್ಬಾಳು ಅರಣ್ಯ ಪ್ರದೇಶಕ್ಕೆ ಕಾಡಾನೆಗಳನ್ನು ಡ್ರೈವ್‌ಮಾಡಲು ಸಿದ್ಧತೆ ನಡೆಸಿದ್ದಾರೆ.