ಮುಂಡಗೋಡ: ಪ್ರಸಕ್ತ ಮುಂಗಾರಿನಲ್ಲಿ ಚೆನ್ನಾಗಿ ಮಳೆಯಾಗಿರು ವುದರಿಂದ ತಾಲೂಕಿನ ಮಳಗಿಯ ಧರ್ವ ಜಲಾಶಯ ತುಂಬಿದ್ದು, ನಳನಳಿಸುತ್ತಿದೆ. ಆದರೆ, ಈ ಜಲಾಶಯಕ್ಕಾಗಿ ಭೂಮಿ ಮತ್ತು ಮನೆಗಳನ್ನು ಬಿಟ್ಟುಕೊಟ್ಟವರ ಮುಖದಲ್ಲಿ ಮಾತ್ರ ಮಂದಹಾಸ ಇಲ್ಲದಾಗಿದೆ. ಏಕೆಂದರೆ, ಅವರಿಗೆ ಸರ್ಕಾರ ನೀಡಿದ ಪರ್ಯಾಯ ಭೂಮಿಯ ದಾಖಲೆಗಳಲ್ಲಿ ‘ಅರಣ್ಯ’ ಎಂದು ದಾಖಲಾಗಿರುವುದರಿಂದ ತೀವ್ರ ತೊಂದರೆ ಅನುಭವಿಸಬೇಕಾಗಿದೆ.
1964ರಲ್ಲಿ ತಾಲೂಕಿನ ಮಳಗಿ ಸನಿಹದಲ್ಲಿ 1400 ಎಕರೆ ಪ್ರದೇಶದಲ್ಲಿ 32 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ವಿುಸಲಾಯಿತು. ಈ ಜಲಾಶಯದಿಂದ ಹಾವೇರಿ ಜಿಲ್ಲೆಯ 30ಕ್ಕೂ ಹೆಚ್ಚು ಗ್ರಾಮಗಳ ರೈತರ 18 ಸಾವಿರ ಎಕರೆ ಹಾಗೂ ಮುಂಡಗೋಡ ತಾಲೂಕಿನ 110 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.
ತಾಲೂಕಿನ 12 ಗ್ರಾಮಗಳು ಹಾಗೂ ಶಿರಸಿ ತಾಲೂಕಿನ ಬದನಗೋಡ ಪಂಚಾಯಿತಿ ವ್ಯಾಪ್ತಿಯ ಆರು ಹಳ್ಳಿಗಳಿಗೆ ಜಲಾಶಯದಿಂದ ಶಾಶ್ವತ ಕುಡಿಯುವ ನೀರು ಯೋಜನೆ ಅನುಷ್ಠಾನಗೊಳಿಸಲಾಗಿದೆ.
ಹಿನ್ನೀರಲ್ಲಿ ಮುಳುಗಡೆ: ಜಲಾಶಯ ನಿರ್ವಣದ ವೇಳೆ ಯಮಗಳ್ಳಿ, ಹಂಡೆಬೈಲ್ ಎಂಬ ಎರಡು ಪುಟ್ಟ ಗ್ರಾಮಗಳು ಹಿನ್ನೀರಿನಲ್ಲಿ ಮುಳುಗಡೆಯಾಗಿವೆ. ಅಲ್ಲದೆ, ಜಲಾಶಯದ ಸುತ್ತಲಿನ ಹೊಸಕೊಪ್ಪ, ಜನಗೇರಿ, ಕ್ಯಾದಗಿಕೊಪ್ಪ ಗ್ರಾಮದ ರೈತರ ಜಮೀನುಗಳು ಮುಳುಗಡೆಯಾಗಿವೆ. ಇದರಿಂದಾಗಿ ಎರಡು ಗ್ರಾಮಗಳ ನೂರಾರು ಕುಟುಂಬಗಳವರು ನಿರಾಶ್ರಿತರಾಗಿದ್ದಾರೆ.
ನಿರಾಶ್ರಿತರಿಗೆ ಆಶ್ರಯ: 100 ಜನ ನಿರಾಶ್ರಿತರಿಗೆ ಹಾನಗಲ್ಲ ತಾಲೂಕಿನ ಶಿವಪುರ ಎಂಬ ಗ್ರಾಮದಲ್ಲಿ ಭೂಮಿ ನೀಡಲಾಗಿದೆ. ಉಳಿದ 150ಕ್ಕೂ ಹೆಚ್ಚು ನಿರಾಶ್ರಿತರಿಗೆ ಜಲಾಶಯದ ಪಕ್ಕದಲ್ಲಿರುವ 324 ಎಕರೆ ಭೂಮಿ ನೀಡಲಾಯಿತು. ಇದರಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದು, ಈ ಪ್ರದೇಶಕ್ಕೆ ಧರ್ವ ಕಾಲನಿ ಎಂದೇ ಕರೆಯಲಾಗುತ್ತದೆ. ಜಮೀನು ಕಳೆದುಕೊಂಡ ರೈತರಿಗೆ ಸಮೀಪದಲ್ಲಿಯೇ ಜಮೀನನ್ನು ನೀಡಲಾಯಿತು.
ತಪ್ಪಿಲ್ಲ ನಿರಾಶ್ರಿತರ ಪರದಾಟ: ಸದ್ಯ ಧರ್ವ ಕಾಲನಿಯಲ್ಲಿ ವಾಸವಿರುವ 150 ನಿರಾಶ್ರಿತ ಕುಟುಂಬಗಳ ಮನೆಯ ಜಾಗ ಹಾಗೂ ಭೂಮಿಯ ದಾಖಲೆಗಳಲ್ಲಿ ಮಾಲೀಕರ ಹೆಸರಿನ ಜೊತೆಗೆ ‘ಅರಣ್ಯ’ ಎಂದು ನಮೂದು ಇದೆ. 1965ರಿಂದ ಮನೆಗಳನ್ನು ನಿರ್ವಿುಸಿಕೊಂಡು, ಮನೆ ಹಾಗೂ ನೀರಿನ ಕರ ಪಾವತಿಸಲಾಗುತ್ತಿದೆ. ಅಲ್ಲದೆ, 324 ಎಕರೆ ಭೂಮಿಯೂ ಕೆಜೆಪಿ ಆಗದಿರುವ ಕಾರಣ ಎಲ್ಲ ದಾಖಲೆಗಳಲ್ಲಿ ‘ಫಾರೆಸ್ಟ್’ ಅಂತಾ ನಮೂದಿಸಲಾಗಿದೆ. ಇದು ನಿರಾಶ್ರಿತರನ್ನು ಆತಂಕಕ್ಕೆ ದೂಡಿದೆ.
ನಿಂತಿಲ್ಲ ಹೋರಾಟ: ಮನೆ ಹಾಗೂ ಜಮೀನಿನ ದಾಖಲೆಗಳಲ್ಲಿ ಅರಣ್ಯ ಎಂದು ಇರುವುದರಿಂದ ಮನೆ ನಿರ್ಮಾಣ ಹಾಗೂ ಜಮೀನುಗಳ ಅಭಿವೃದ್ಧಿಗೆ ಸಾಲಸೌಲಭ್ಯ ಸಿಗುತ್ತಿಲ್ಲ. ಜಮೀನು ಮಾರಲು, ಖರೀದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಗ್ರಾಮಸ್ಥರು ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತ ಬಂದಿದ್ದರೂ ಪ್ರಯೋಜನವಾಗಿಲ್ಲ.
ಈ ಕುರಿತು ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಿ ನಿರಾಶ್ರಿತರಾದ ತಮ್ಮ ಮನೆಗಳು ಹಾಗೂ ಜಮೀನುಗಳ ದಾಖಲಾತಿಗಳನ್ನು ಸರಿಪಡಿಸಿ ಕೊಡಬೇಕು ಎಂದು ತಾಲೂಕಾಡಳಿತವನ್ನು ಒತ್ತಾಯಿಸುತ್ತಿದ್ದಾರೆ.
ಧರ್ವ ಜಲಾಶಯ ಹಿನ್ನೀರಿನಲ್ಲಿ ಭೂಮಿ ಹಾಗೂ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಸರ್ಕಾರ ಹಂಚಿಕೆ ಮಾಡಿರುವ 324 ಎಕರೆ ದಾಖಲೆಗಳಲ್ಲಿ ಮಾಲೀಕರ ಹೆಸರಿನ ಜೊತೆ ಫಾರೆಸ್ಟ್ ಎಂದು ಇರುವುದನ್ನು ಕಡಿಮೆ ಮಾಡುವ ಪ್ರಯತ್ನ ನಿರಂತರವಾಗಿ ನಡೆಸಿದ್ದೇನೆ. ಅರಣ್ಯ ಇಲಾಖೆಯ ನಿಯಮಗಳಿಂದ ವಿಳಂಬವಾಗಿದೆ. | ಶಿವರಾಮ ಹೆಬ್ಬಾರ ಶಾಸಕ ಯಲ್ಲಾಪುರ
ನಿರಾಶ್ರಿತ ಕುಟುಂಬಗಳಿಗೆ ಧರ್ವ ಕಾಲನಿ ಬಳಿ 324 ಎಕರೆ ಪ್ರದೇಶದಲ್ಲಿ ಜಮೀನು ಹಾಗೂ ಮನೆ ಜಾಗ ಹಂಚಿಕೆ ಮಾಡಿದ್ದರು. ಜಮೀನು ಹಾಗೂ ಮನೆಯ ದಾಖಲೆಗಳಲ್ಲಿ ಮಾಲೀಕರ ಹೆಸರುಗಳಿದ್ದವು. ಆದರೆ, ಇತ್ತೀಚೆಗೆ ಈ ಜಮೀನುಗಳು ಕೆಜೆಪಿ ಆಗಿಲ್ಲವೆಂದು ದಾಖಲೆಗಳಲ್ಲಿ ಫಾರೆಸ್ಟ್ ಎಂದು ನಮೂದು ಮಾಡಿದ್ದಾರೆ. ಇದರಿಂದ ನಮಗೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಅರಣ್ಯ ಅಥವಾ ಫಾರೆಸ್ಟ್ ಅಂತ ಇರುವುದು ತೀವ್ರ ತೊಡಕಾಗಿದ್ದು, ಆ ಶಬ್ದವನ್ನು ತೆಗೆದುಹಾಕಬೇಕು. | ಗಣಪತಿ ಹೆಗಡೆ ನಿರಾಶ್ರಿತ ಧರ್ವ ಕಾಲನಿ ಮುಂಡಗೋಡ