ಜಿಲ್ಲೆ

ಮಲೆನಾಡಿನಲ್ಲಿ ಮತ್ತೆ ಕಾಡಾನೆ ಹಾವಳಿ

ಜಿ.ಹೆಚ್. ಧನ್ಯಕುಮಾರ್

ಆಲ್ದೂರು: ಆಲ್ದೂರು ಸುತ್ತಮುತ್ತಲಿನ ಕಾಫಿ ತೋಟಗಳಿಗೆ ಮಂಗಳವಾರ ರಾತ್ರಿ ಕಾಡಾನೆಗಳು ಲಗ್ಗೆ ಇಟ್ಟಿದ್ದು ,ಕಾಫಿ ತೋಟದ ಮಾಲೀಕರು ಕಾಡಾನೆಗಳ ಉಪಟಳಕ್ಕೆ ಹೈರಾಣಾಗಿದ್ದಾರೆ.

ಬುಧವಾರ ರಾತ್ರಿ ಅರೇಹಳ್ಳಿ ಭಾಗದಿಂದ ಬಂದಿರುವ ಕಾಡಾನೆಗಳ ಗುಂಪು ಚಟ್ನಳ್ಳಿ, ಗಬ್ಬಳ್ಳಿಪುರ, ಮಾಕೋನಹಳ್ಳಿ,ನಂದೀಪುರ ಮಾರ್ಗವಾಗಿ ಕಾಫಿ ತೋಟಗಳ ಮೂಲಕ ಹಾದು ಬಂದಿವೆ. 21ಆನೆಗಳ ಗುಂಪು ಬುಧವಾರ ಆಲ್ದೂರು ಭಾಗದ ಮಡೆನೂರು, ಯಲಗುಡಿಗೆ,ಹಳೆ ಆಲ್ದೂರು, ಆಲ್ದೂರು ಹೊಸಳ್ಳಿ, ತುಡುಕೂರು ಭಾಗದ ಗೋಪಾಲಗೌಡ ಅವರ ಕಾಫಿ ತೋಟದಲ್ಲಿ ಬೀಡು ಬಿಟ್ಟಿವೆ.

ಈ ಹಿಂದೆ ಸಕಲೇಶಪುರ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಬೀಟಮ್ಮ ಹಾಗು ಭುವನೇಶ್ವರಿ ತಂಡದ ಆನೆಗಳು ಸಂಚರಿಸುತ್ತಿದ್ದು ಈ ಆನೆಗಳಿಗೆ ಕಾಲರ್ ಐಡಿ ಅಳವಡಿಸಲಾಗಿತ್ತು .ಇದರಿಂದ ಆನೆಗಳ ಸಂಚಾರದ ಬಗ್ಗೆ ಅರಣ್ಯಇಲಾಖೆಗೆ ನಿಖರ ಮಾಹಿತಿ ದೊರೆಯುತ್ತಿತ್ತು. ಬೀಟಮ್ಮ -1 ಬೀಟಮ್ಮ-2 ಮತ್ತು ಭುವನೇಶ್ವರಿ ಆನೆಗಳಿಗೆ ಕಾಲರ್‌ಐಡಿ ಆಳವಡಿಸಿದ್ದು ಅವುಗಳು ಸಕಲೇಶಪುರ, ಬಿಕ್ಕೋಡು, ಅರೇಹಳ್ಳಿ ಗ್ರಾಮದ ಬಳಿ ಸಂಚರಿಸುತ್ತಿರುವ ಬಗ್ಗೆ ಕಾಲರ್‌ಐಡಿಯಿಂದ ಪತ್ತೆಯಾಗುತ್ತಿದೆ.

ಆದರೆ ಈಗ ಬೀಡು ಬಿಟ್ಟಿರುವ ಆನೆಗಳ ಗುಂಪಿನಲ್ಲಿ ಕಾಲರ್ ಐಡಿ ಆಳವಡಿಸಿರುವ ಆನೆಗಳು ಇಲ್ಲದ ಕಾರಣ ಇವುಗಳ ಇರುವಿಕೆ ಪತ್ತೆ ಮಾಡುವುದು ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಕಾಡಾನೆಗಳು ಕಾಫಿ ತೋಟದಲ್ಲೇ ಬೀಡು ಬಿಟ್ಟಿದ್ದು ಇವುಗಳನ್ನು ಕಾಡಿಗೆ ಓಡಿಸಲು ಪಕ್ಕದಲ್ಲಿ ಯಾವುದೇ ಅರಣ್ಯವಿಲ್ಲ. ಪಟ್ಟಣಕ್ಕೆ ಹೊಂದಿಕೊಂಡಂತೆ ಕಾಫಿ ತೋಟಗಳಿದ್ದು ಆನೆಗಳನ್ನು ಓಡಿಸಲು ಪ್ರಯತ್ನಿಸಿದರೆ ಆನೆಗಳ ಗುಂಪು ಆಲ್ದೂರು ಪಟ್ಟಣಕ್ಕೆ ನುಗ್ಗುವ ಸಾಧ್ಯತೆಗಳಿವೆ. ಕಾಡಾನೆಗಳ ತಂಡದಲ್ಲಿ ಮೂರು ಮರಿ ಆನೆಗಳಿದ್ದು , ಇವುಗಳಿಗೆ ಯಾವುದೇ ತೊಂದರೆ ಮಾಡದೇ ಇವುಗಳನ್ನು ಓಡಿಸುವುದು ಅರಣ್ಯ ಇಲಾಖೆಗೆ ಸವಾಲಾಗಿದೆ.