ಮಡಿಕೇರಿ: ಜನರ ಬಳಿ ಇರುವ ಪಾರಂಪರಿಕ ಅರಣ್ಯ ವಸ್ತುಗಳನ್ನು ಏಪ್ರಿಲ್ ತಿಂಗಳೊಳಗೆ ಸರ್ಕಾರದ ಅಧೀನಕ್ಕೆ ಒಪ್ಪಿಸಬೇಕು ಎನ್ನುವ ಅರಣ್ಯ ಇಲಾಖೆಯ ಆದೇಶ ಆತಂಕವನ್ನು ಸೃಷ್ಟಿಸಿದ್ದು, ಸರ್ಕಾರ ಈ ವಿಚಾರದಲ್ಲಿ ದುಡುಕದೆ ಜನಪರ ನಿರ್ಧಾರವನ್ನು ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅರಣ್ಯ ಪ್ರಾಣಿಗಳ ಉತ್ಪನ್ನಗಳನ್ನು ಘೋಷಿಸಿಕೊಳ್ಳಬೇಕೆಂಬ ಕಾಯ್ದೆ ೨೦೦೩ರಲ್ಲಿ ಜಾರಿಯಾಗಿರುವ ವಿಚಾರ ಬಹುತೇಕರ ಗಮನಕ್ಕೆ ಬಂದಿರುವುದಿಲ್ಲ. ಈಗ ಏಕಾಏಕಿ ಪಾರಂಪರಿಕ ಅರಣ್ಯ ವಸ್ತುಗಳನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕೆಂದು ಆದೇಶಿಸಿರುವುದು ಸರಿಯಾದ ಕ್ರಮವಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.
ಕೊಡಗಿನ ಜನರು ತಮ್ಮದೇ ಆದ ರೀತಿಯಲ್ಲಿ ಹಬ್ಬ ಹರಿದಿನಗಳನ್ನು ತಲೆ-ತಲಾಂತರಗಳಿಂದ ಆಚರಿಸುತ್ತಾ ಬರುತ್ತಿದ್ದು, ಇಲ್ಲಿಯ ಆಚರಣೆಗಳು ವಿಶಿಷ್ಟ ರೀತಿಯದ್ದಾಗಿದೆ. ಅಂದಿನ ದಿನಗಳಲ್ಲಿ ಬೇಟೆಯ ಸಂದರ್ಭ ಸಿಕ್ಕಿದ ಜಿಂಕೆ, ಕಡವೆ ಮತ್ತಿತರ ಪ್ರಾಣಿಗಳ ಕೊಂಬುಗಳನ್ನು ಶೇಖರಿಸಿಡುತ್ತಿದ್ದರು. ಸೋಮವಾರಪೇಟೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಈಗಲೂ ಸುಗ್ಗಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ ಈಗ ಪ್ರಾಣಿ ಬೇಟೆ ಇರುವುದಿಲ್ಲ. ಕೊನೆಯ ದಿನ ದೇವಸ್ಥಾನಗಳಲ್ಲಿ ಊರಿನವರು ಹಾಗೂ ಬಂಧು ಮಿತ್ರರು ಸೇರಿ ಶೇಖರಿಸಿಟ್ಟಿರುವ ಪ್ರಾಣಿಗಳ ಕೊಂಬುಗಳನ್ನು ಪ್ರದರ್ಶಿಸಿ, ಕುಣಿದು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಪ್ರಾಣಿಗಳ ಕೊಂಬುಗಳು ನೂರಾರು ಸಂಖ್ಯೆಯಲ್ಲಿದ್ದು, ಸುಗ್ಗಿ ಆಚರಣೆಯ ದಿನ ದೇವಾಲಯಗಳಲ್ಲಿ ಪ್ರದರ್ಶನಕ್ಕಿಡುವ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ. ಆದ್ದರಿಂದ ಸರ್ಕಾರ ಜಿಲ್ಲೆಯ ಜನ ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ, ಜನಪರ ನಿಲುವು ತೆಗೆದುಕೊಳ್ಳಬೇಕು. ಜತೆಗೆ ಆದೇಶವನ್ನು ಪುನರ್ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಜನರಲ್ಲಿರುವ ಆತಂಕವನ್ನು ದೂರ ಮಾಡಬೇಕೆಂದು ಎಸ್.ಎಂ.ಚಂಗಪ್ಪ ಒತ್ತಾಯಿಸಿದ್ದಾರೆ.