ಮೂಡಿಗೆರೆ: ಒಂಟಿ ಕಾಡಾನೆ ಮುದ್ರೆಮುನೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ಕಾಣಿಸಿಕೊಂಡಿದ್ದು, ಕಾಫಿ ತೋಟದೊಳಗೆ ಸಂಚರಿಸುತ್ತ ಹೇಮಾವತಿ ನದಿ ದಾಟಿ 15 ಕಿ.ಮೀ ದೂರದ ಕಿರುಗುಂದ ಗ್ರಾಮವನ್ನು ಪ್ರವೇಶಿಸಿದೆ.
ಎರಡು ದಿನದ ಹಿಂದೆ ಬೇಲೂರು ತಾಲೂಕಿನ ಕಾನಹಳ್ಳಿ ಅರಣ್ಯದಿಂದ 3 ಕಾಡಾನೆ ಗುಂಪಾಗಿ ಮಾಕೋನಹಳ್ಳಿ, ನಂದಿಪುರ ಗ್ರಾಮದ ಮೂಲಕ ಸಾಗಿ ಕಡೆಮಾಡ್ಕಲ್ ಗ್ರಾಮದಲ್ಲಿ ಬೀಡುಬಿಟ್ಟಿದ್ದವು. ಗುಂಪಿನಿಂದ ಬೇರ್ಪಟ್ಟ ಒಂದು ಕಾಡಾನೆ ಮಂಗಳವಾರ ಬೆಳಗ್ಗೆ ಸಕಲೇಶಪುರದ ಮಾರ್ಗದ ಜಾಡು ಹಿಡಿದು ಸಂಚರಿಸಿದೆ. ಗುಂಪಿನ ಇನ್ನೆರಡು ಕಾಡಾನೆಗಳು ಕಡೆಮಾಡ್ಕಲ್ ಗ್ರಾಮದ ಕಾಫಿ ತೋಟದಲ್ಲಿ ಬೀಡುಬಿಟ್ಟಿವೆ.
ಒಂಟಿ ಕಾಡಾನೆ ತಿರುಗಾಡುತ್ತಿರುವ ಮಾಹಿತಿ ತಿಳಿದ ಹಾಲೂರು, ಹಂಡುಗುಳಿ, ಅಣಜೂರು, ಉಗ್ಗೆಹಳ್ಳಿ, ಬೆಟ್ಟದಮನೆ, ಕನ್ನೆಹಳ್ಳಿ ಕಿರುಗುಂದ ಗ್ರಾಮಗಳ ಜನ ಹೆದರಿ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ಕಾಫಿ ತೋಟದ ಕೆಲಸಕ್ಕೆ ಹೋಗಿದ್ದ ಕಾರ್ಮಿಕರು ಮನೆಗೆ ವಾಪಸಾಗಿದ್ದಾರೆ. ಶಾಲೆಗೆ ತೆರಳಿದ್ದ ವಿದ್ಯಾರ್ಥಿಗಳನ್ನು ಪಾಲಕರು ಮನೆಗೆ ಕರೆದೊಯ್ದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ಸಂಚರಿಸುತ್ತಿರುವ ಕಡೆ ಕೂಂಬಿಂಗ್ ನಡೆಸುತ್ತಿದ್ದಾರೆ. ಗ್ರಾಮಗಳತ್ತ ಆನೆ ಬರದಂತೆ ಜಾಗೃತಿ ವಹಿಸಿದ್ದಾರೆ. ಕಡೆಮಾಡ್ಕಲ್ ಗ್ರಾಮದಲ್ಲಿ 2 ಕಾಡಾನೆ ಬೀಡುಬಿಟ್ಟಿರುವುದರಿಂದ ಅಲ್ಲಿನ ಜನ ಭಯಭೀತರಾಗಿ ಮನೆಯಿಂದ ಹೊರ ಬಂದಿಲ್ಲ.
ಬೇಲೂರು ತಾಲೂಕಿನ ಕಾನಹಳ್ಳಿ ಅರಣ್ಯದಿಂದ ಹೊರಟಿರುವ 3 ಕಾಡಾನೆಗಳು ಮೂಡಿಗೆರೆ ತಾಲೂಕಿನ ಕಡೆಮಾಡ್ಕಲ್ ಗ್ರಾಮದಲ್ಲಿ ಬೀಡುಬಿಟ್ಟಿದ್ದವು. ಗುಂಪಿನಿಂದ ಬೇರ್ಪಟ್ಟ ಒಂಟಿ ಕಾಡಾನೆ ಮುದ್ರೆಮನೆ ಮೂಲಕ ಕಿರುಗುಂದ ಗ್ರಾಮಕ್ಕೆ ಪ್ರವೇಶಿಸಿದೆ. ಹಗಲಿನಲ್ಲಿ ಕಾಡಾನೆಯನ್ನು ಓಡಿಸಿದಲ್ಲಿ ಜನವಸತಿ ಪ್ರದೇಶಕ್ಕೆ ನುಗ್ಗುವ ಆತಂಕವಿದೆ. ಕಾಡಾನೆಯನ್ನು ರಾತ್ರಿ ಸಕಲೇಶಪುರದ ಅರಣ್ಯಕ್ಕೆ ಅಥವಾ ಬೇಲೂರಿನ ಕಾನಹಳ್ಳಿ ಅರಣ್ಯಕ್ಕೆ ಅಟ್ಟಲಾಗುವುದು ಎಂದು ಗೋಣಿಬೀಡು ಉಪ ವಲಯಾರಣ್ಯಾಧಿಕಾರಿ ಶಿವಕುಮಾರ್ ಮಾಹಿತಿ ನೀಡಿದ್ದಾರೆ.