ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ನೆಲಮಂಗಲ ತಾಲೂಕು ಕಂಬಾಳುಗೊಲ್ಲರಹಟ್ಟಿಯಲ್ಲಿ ಚಿರತೆಗೆ ಮಹಿಳೆ ಬಲಿಯಾದ ಪ್ರಕರಣದ ಬಳಿಕವೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ ಎಂಬ ಬೇಸರ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಾಡುತ್ತಿದೆ..!
ಸತತ 9 ದಿನ ಗ್ರಾಮದ ಅರಣ್ಯಪ್ರದೇಶ ವ್ಯಾಪ್ತಿಯಲ್ಲಿ ಬೀಡುಬಿಟ್ಟ ಸುಮಾರು 40 ಮಂದಿ ಅರಣ್ಯ ಸಿಬ್ಬಂದಿಗೆ ಈ ಅನುಭವವಾಗಿದೆ ಎನ್ನಲಾಗಿದೆ. ಚಿರತೆ ಸೆರೆ ಹಗಲು-ರಾತ್ರಿ ಕಾರ್ಯಾಚರಣೆಯಲ್ಲಿ ಮಗ್ನರಾಗಿದ್ದ ಸಿಬ್ಬಂದಿ ಜನರಿಗೆ ಕಾಡುಮೃಗಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಎಚ್ಚರಿಕೆ ವಹಿಸುವಂತೆ ಮನವಿ ಮಾಡುತ್ತಿದ್ದರೂ ಬಹಳಷ್ಟು ಜನ ಅದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸಂಜೆ ಬಳಿಕ ಅರಣ್ಯದಂಚಿನಲ್ಲಿ ಸಂಚಾರ ಮಾಡದಂತೆ ಸಾಕಷ್ಟು ಬಾರಿ ಎಚ್ಚರಿಕೆ ನೀಡುತ್ತಿದ್ದರು ಅನೇಕರು ಅದೇ ಕೆಲಸ ಮಾಡುತ್ತಿದ್ದರು. ಗದರಿದರೆ ಎದುರುಬೀಳುವುದು, ನಿಮ್ಮ ಕೆಲಸವೇನಿದ್ದರೂ ಚಿರತೆ ಹಿಡಿಯುವುದಷ್ಟೇ ಉಪದೇಶ ಮಾಡುವುದಲ್ಲ ಎಂಬಂತೆ ವರ್ತಿಸುವುದು ಸಿಬ್ಬಂದಿಗೆ ಸಾಕಷ್ಟು ನೋವು ಮಾಡಿದೆ ಎಂಬ ಮಾತು ಕೇಳಿಬರುತ್ತಿದೆ.
ಸಾಕಷ್ಟು ಚಿರತೆಗಳಿವೆ: ಅರಣ್ಯ ಇಲಾಖೆ ಅಳವಡಿಸಿದ್ದ ಸಿಸಿ ಕ್ಯಾಮರಾಗಳಲ್ಲಿ ಕರಡಿ ಸೇರಿ 2 ಗಂಡು ಚಿರತೆಗಳ ಚಲನವಲನ ಸೆರೆಯಾಗಿದೆ. ಇದರಲ್ಲಿ ಸಿಕ್ಕಿಬಿದ್ದಿರುವುದು ಒಂದು ಗಂಡು ಚಿರತೆಯಾಗಿದ್ದರೆ ಮತ್ತೊಂದು ಗಂಡು ಚಿರತೆ ಸಂಚಾರ ಇದೇ ವ್ಯಾಪ್ತಿಯಲ್ಲಿದೆ ಎಂಬುದು ಅರಣ್ಯ ಇಲಾಖೆಯ ಶಂಕೆಯಾಗಿದೆ. ನೆರೆಜಿಲ್ಲೆಗಳೊಂದಿಗೆ ಬೆಸೆದುಕೊಂಡಿರುವ ಅರಣ್ಯ ಪ್ರದೇಶದಲ್ಲಿ ಎಲ್ಲಿಂದ ಚಿರತೆಗಳು ಬರುತ್ತವೆ ಯಾವ ಕಡೆಗೆ ಸಾಗುತ್ತವೆ ಎಂಬುದನ್ನು ಅಂದಾಜಿಸಲು ಸಾಧ್ಯವಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಈ ಭಾಗದಲ್ಲಿ ನಾಲ್ಕೈದು ಚಿರತೆಗಳ ಸಂಚಾರವಿದೆ ಎಂದು ಅಂದಾಜಿಸಲಾಗಿದ್ದು ಯಾವಾಗ ಅರಣ್ಯದಂದಿನಲ್ಲಿ ದಾಳಿ ಮಾಡುತ್ತವೆ ಎಂಬುದು ಊಹಿಸಲಾಗುವುದಿಲ್ಲ. ಆದರೂ ಜನರು ಅರಣ್ಯ ಪ್ರದೇಶಕ್ಕೆ ಜಾನುವಾರುಗಳನ್ನು ಕರೆದೊಯ್ಯವುದು ಸಾಮಾನ್ಯವಾಗಿದೆ. ಜನರು ಜಾಗೃತರಾಗಗಿದ್ದರೆ ಇಂಥ ಪ್ರಕರಣಗಳು ಮತ್ತೆ ಮರುಕಳಿಸಬಹುದು ಎಂಬ ಆತಂಕ ಸಿಬ್ಬಂದಿಯದ್ದಾಗಿದೆ.
ಗುಡ್ಡದಂಚಿನಲ್ಲಿ ಮದ್ಯಪಾನ! ಕಾರ್ಯಾಚರಣೆ ವೇಳೆ ಹಲವರು ಗುಡ್ಡದ ಅಂಚಿನಲ್ಲೇ ಸಂಜೆ ಬಳಿಕ ಮದ್ಯಪಾನ ಮಾಡುವ ರೂಢಿ ಮಾಡಿಕೊಂಡಿದ್ದಾರೆ. 9 ದಿನಗಳ ಕಾರ್ಯಾಚರಣೆಯಲ್ಲಿ ಇಂಥ ದೃಶ್ಯಗಳನ್ನು ಸಾಕಷ್ಟು ಗಮನಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಮದ್ಯಪ್ರಿಯರಿಗೆ ತಿಳಿಹೇಳುವ ವ್ಯರ್ಥ ಸಾಹಸ ಮಾಡಿದ್ದಾರೆ. ಸಿಬ್ಬಂದಿ ಮಾತಿಗೆ ಕಿವಿಗೊಡದೆ ವಿತಂಡ ವಾದ ಮಾಡುವ ಜನರ ವರ್ತನೆಯಿಂದ ಅಧಿಕಾರಿಗಳು ಹೈರಾಣಾಗಿದ್ದಾರೆ. ಅಲ್ಲದೆ ಕಾಡಂಚಿನ ಪ್ರದೇಶವನ್ನು ಕಾನೂನುಬಾಹಿರ ಚಟುವಟಿಕೆಗಳ ತಾಣವನ್ನಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ. ಅಲ್ಲಿಯೇ ಬೆಂಕಿ ಕಾಯಿಸಿಕೊಳ್ಳುವುದು, ಕೋಳಿ ಮತ್ತಿತರ ಪ್ರಾಣಿಗಳನ್ನು ಬೇಯಿಸಿ ತಿನ್ನುವುದು ಮಾಡುತ್ತಾರೆ. ಇದಕ್ಕೆ ಅರಣ್ಯದಂಚಿನಲ್ಲಿ ಚೆಲ್ಲಾಡಿರುವ ಮದ್ಯದ ಖಾಲಿ ಬಾಟಲಿಗಳು ಬೀಡಿಸಿಗರೇಟಿನ ತುಂಡುಗಳೇ ಸಾಕ್ಷಿ ಎಂದು ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ವೈರಿಗಳಂತೆ ನೋಡುತ್ತಾರೆ: ಗ್ರಾಮೀಣ ಪ್ರದೇಶದಲ್ಲಿ ಚಿರತೆ ಮತ್ತಿತರ ಕಾಡುಪ್ರಾಣಿಗಳು ಕಾಣಿಸಿಕೊಂಡರೆ ಅವುಗಳನ್ನು ಸೆರೆಹಿಡಿಯುವಂತೆ ಒತ್ತಡ ಹಾಕುತ್ತಾರೆ. ಸ್ಥಳಕ್ಕೆ ತೆರಳಿದ ಸಿಬ್ಬಂದಿಯನ್ನು ವೈರಿಗಳಂತೆ ಕಾಣುತ್ತಾರೆ. ಕಾಡುಪ್ರಾಣಿಗಳನ್ನು ಹಿಡಿಯುವುದಷ್ಟೆ ಅರಣ್ಯ ಇಲಾಖೆಯವರ ಕೆಲಸ ಎಂಬಂತೆ ಮಾತನಾಡುತ್ತಾರೆ ಎಂದು ಕೆಲವು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ಸಿಬ್ಬಂದಿಗೆ ಅನಾರೋಗ್ಯ: ಸತತ ಕಾರ್ಯಾಚರಣೆಯಲ್ಲಿ 40ಕ್ಕೂ ಹೆಚ್ಚು ಸಿಬ್ಬಂದಿ ಅನಾರೋಗ್ಯಗೊಂಡಿದ್ದಾರೆ. ಕೊರೆವ ಚಳಿಯಲ್ಲಿ ಸೊಳ್ಳೆಕಾಟದಿಂದ ಹೈರಾಣಾಗಿದ್ದಾರೆ. ಮೂಲಸೌಕರ್ಯವೂ ಇಲ್ಲದೆ ಚಿರತೆ ಸೆರೆಗೆ ನಡೆಸಿದ ಹರಸಾಹಸ ಸಿಬ್ಬಂದಿಯನ್ನು ಹಿಂಡಿಹಿಪ್ಪೆಕಾಯಿ ಮಾಡಿದೆ. ಕೆಲವರಿಗೆ ಈಗಾಗಲೇ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಿಗೆ ಕಳುಹಿಸಿಕೊಡಲಾಗಿದೆ. ಕಾರ್ಯಾಚರಣೆ ಮುಂದುವರೆದಿದ್ದು ಮತ್ತಷ್ಟು ಸಿಬ್ಬಂದಿ ಅನಾರೋಗ್ಯದ ಭೀತಿ ಎದುರಿಸುತ್ತಿದ್ದಾರೆ.
ಮತ್ತಷ್ಟು ವ್ಯಗ್ರಗೊಳ್ಳುತ್ತವೆ: ಬೋನಿನಲ್ಲಿ ಸೆರೆಯಾದ ಕಾಡುಮೃಗಗಳು ಮತ್ತಷ್ಟು ವ್ಯಗ್ರವಾಗುತ್ತವೆ, ಬೋನಿನಿಂದ ತಪ್ಪಿಸಿಕೊಳ್ಳಲು ಹೋಗಿ ಸಾಕಷ್ಟು ಗಾಯಗೊಳ್ಳುತ್ತವೆ, ಆದ್ದರಿಂದ ಅರಣ್ಯಪ್ರದೇಶದ ಒತ್ತುವರಿ, ಸಂರಕ್ಷಿತ ಅರಣ್ಯ ಪ್ರದೇಶಗಳ ಪ್ರವೇಶ ಸೇರಿ ಕಾಡಂಚಿನಲ್ಲಿ ಮೇವಿಗಾಗಿ ಅರಸುವುದು, ಬೆಂಕಿ ಹಚ್ಚುವುದು ಇಂಥ ಕೆಲಸಗಳಿಂದ ಜನ ದೂರವಿರಬೇಕು ಎಂಬುದು ಇಲಾಖೆಯ ಮನವಿಯಾಗಿದೆ.
ಬೋನು ಸಾಗಾಣೆ ಹರಸಾಹಸ: ದಟ್ಟಾರಣ್ಯ ಪ್ರದೇಶ ಹೊಂದಿರುವ ಜಿಲ್ಲೆಗಳ ಅರಣ್ಯ ಇಲಾಖೆಗೆ ಅನುದಾನ ಹೆಚ್ಚಿರುತ್ತದೆ ಗ್ರಾಮಾಂತರ ಜಿಲ್ಲೆಯಂತ ಪ್ರದೇಶಗಳಲ್ಲಿ ಅನುದಾನ ಕೊರತೆ ಸಾಮಾನ್ಯ. ಕಾರ್ಯಾಚರಣೆಗೆ ಬೋನು ಸಾಗಾಣೆಯೆ ದೊಡ್ಡ ಸಾಹಸವಾಗಿರುತ್ತದೆ. ಅತೀ ಭಾರವಾದ ಬೋನು ಸಾಗಣೆಗೆ ವಾಹನ ಸೇರಿ ಸಿಬ್ಬಂದಿ ವೆಚ್ಚ ಭರಿಸುವುದು ಕಷ್ಟಸಾಧ್ಯ ಎಂಬ ಪರಿಸ್ಥಿತಿ ಇದೆ. ಜಿಲ್ಲಾ ವ್ಯಾಪ್ತಿಯ ಎಲ್ಲ ಕಡೆಯ ಅರಣ್ಯದಂಚಿನಲ್ಲಿ ಬೋನುಗಳನ್ನು ಇಟ್ಟು ಕಾಡುಮೃಗಗಳ ಸೆರೆ ಹಿಡಿಯುವುದು ದುಸ್ಸಾಹಸದ ಕೆಲಸವಾಗಿದೆ ಎಂಬುದು ಅಧಿಕಾರಿಗಳ ಅಳಲಾಗಿದೆ.
ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡುಮೃಗಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ ಆದರೂ ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಾಡುಮೃಗಗಳ ಬಗ್ಗೆ ಮೊಂಡುವಾದ ಮಾಡುತ್ತಾರೆ. ಕೆಲವರು ಎಚ್ಚರಿಕೆ ನೀಡಿದರೆ ನಮಗೆ ಗದರುತ್ತಾರೆ. ಸಂಜೆ ಬಳಿಕವೂ ಕಾಡಂಚಿನಲ್ಲಿ ಜಾನುವಾರುಗಳನ್ನು ಮೇಯಿಸುವುದು, ಹುಲ್ಲುಕುಯ್ಯಲು ಹೋಗುವುದು ಮಾಡುತ್ತಾರೆ. ಜನರು ಎಚ್ಚೆತ್ತುಕೊಳ್ಳದಿದ್ದರೆ ಇಂಥ ಪ್ರಕರಣಗಳು ಮರುಕಳಿಸುತ್ತಲೇ ಇರುತ್ತವೆ.
ಹೆಸರೇಳಲಿಚ್ಚಿಸದ ಅರಣ್ಯ ಇಲಾಖೆ ಸಿಬ್ಬಂದಿ ನೆಲಮಂಗಲ