ಜಿಲ್ಲೆ

ಅರಣ್ಯದಲ್ಲಿ ಗುಂಡು ಹಾರಿಸಿ ಹತ್ಯೆ

Belagavi

ಬೆಳಗಾವಿ: ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೋರ್ವ ಕರಡಿ ದಾಳಿಯಿಂದ ಮೃತಪಟ್ಟಿದ್ದಾನೆ ಎಂದು ದಾಖಲಾಗಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಆತನನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದ ಐವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಖಾನಾಪುರ ತಾಲೂಕಿನ ಅಮಟೆ ಗ್ರಾಮದ ದೇವಿದಾಸ ರಾಜಾರಾಮ ಗಾವಕರ್ (28), ಸಂತೋಷ ಸೋಮಾ ಗಾವಕರ್ (32), ವಿಠ್ಠಲ ಗಣಪತಿ ನಾಯಕ(40), ರಾಮಾ ಗಣಪತಿ ನಾಯಕ (21) ಹಾಗೂ ಜಾಂಬೋಟಿಯ ಪ್ರಶಾಂತ ಗಣಪತಿ ಸುತಾರ (28) ಬಂಧನಕ್ಕೊಳಗಾದವರು.

ಘಟನೆ ಹಿನ್ನೆಲೆ: ಮಾ.11ರಂದು ಅಮಟೆ ಗ್ರಾಮದ ಹೊರವಲಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ಜಾನುವಾರು ಮೇಯಿಸಲು ಹೋಗಿದ್ದ ತಾನಾಜಿ ಟೋಪಾ ನಾಯಕ (35) ಎಂಬಾತನ ಮೇಲೆ ಕರಡಿ ದಾಳಿ ಮಾಡಿದ್ದರಿಂದ ಸಾವನ್ನಪ್ಪಿದ್ದ ಎಂದು ಪ್ರಕರಣ ದಾಖಲಾಗಿತ್ತು. ಕರಡಿ ದಾಳಿಯಿಂದ ತಾನಾಜಿಯ ತಲೆ ಹಾಗೂ ಬೆನ್ನಿಗೆ ತೀವ್ರ ಗಾಯವಾಗಿ ಮೃತಪಟ್ಟಿದ್ದ. ಇದೇ ರೀತಿಯಲ್ಲೇ ಮೃತನ ಪತ್ನಿ ತೇಜಸ್ವಿನಿ ತಾನಾಜಿ ನಾಯಕ ಮಾ.11ರಂದು ಖಾನಾಪುರ ಠಾಣೆಯಲ್ಲಿ ದೂರು ನೀಡಿದ್ದಳು.

ದೇಹದಲ್ಲಿ ಗುಂಡು ಪತ್ತೆ: ತದನಂತರ ತಾನಾಜಿ ಟೋಪಾ ನಾಯಕನ ಮರಣೋತ್ತರ ಪರೀಕ್ಷೆ ನಡೆಸಿದಾಗ ಆತನು, ಬಂದೂಕಿನಿಂದ ಹಾರಿಸಿದ ಗುಂಡಿನಿಂದ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮೃತನ ಪತ್ನಿ ಮಾ. 14ರಂದು ಖಾನಾಪುರ ಪೊಲೀಸ್ ಠಾಣೆಯಲ್ಲಿ ‘ಯಾವುದೋ ಕಾರಣಕ್ಕೆ ತನ್ನ ಪತಿಯನ್ನು ಅರಣ್ಯದಲ್ಲಿ ಹತ್ಯೆ ಮಾಡಿದ್ದಾರೆ’ ಎಂದು ಮತ್ತೊಂದು ದೂರು ದಾಖಲಿಸಿದ್ದಳು.

ಬೈಲಹೊಂಗಲದ ಡಿಎಸ್ಪಿ ಜೆ.ಎಂ. ಕರುಣಾಕರಶೆಟ್ಟಿ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಿದ ಐವರನ್ನು ಬಂಧಿಸುವಲ್ಲಿ ಯಶ ಕಂಡಿದ್ದಾರೆ. ತನಿಖಾ ತಂಡದಲ್ಲಿ ಸಿಪಿಐ ಸುರೇಶ ಶಿಂಗಿ, ಪಿಎಸ್‌ಐ ಬಸವನಗೌಡ ಪಾಟೀಲ, ಸಿಬ್ಬಂದಿ ಶಿವಕುಮಾರ ಬಳ್ಳಾರಿ, ಅರುಣ ಹುಕ್ಕೇರಿ, ಜಗದೀಶ ಕಾದ್ರೋಳ್ಳಿ, ಸತೀಶ ಮಾಂಗ, ಶಿವಕುಮಾರ ತುರಮಂದಿ, ಸಿದ್ಧರಾಮ ಪೂಜಾರಿ, ಉಳವಪ್ಪ ಪಾಟೀಲ, ಷರ್ೀ ದೇದಾರ, ಫಕೀರಪ್ಪ ದುರದುಂಡಿ, ಪ್ರವೀಣ ಹೊಂಡದ, ನಾಗೇಂದ್ರ ಇಂಚಲ, ಶಿವಾನಂದ ಸಾತಪ್ಪನವರ ಇನ್ನಿತರರು ಇದ್ದರು. ಹತ್ಯೆ ಮಾಡಿದ್ದೇಕೆ ಎಂಬ ವಿಷಯವಾಗಿ ತನಿಖೆ ಮುಂದುವರಿದಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಗುಂಡು ಹಾರಿಸಿ ಹತ್ಯೆ ಮಾಡಿ ಕರಡಿ ದಾಳಿಯಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂಬ ಪ್ರಕರಣವನ್ನು ಹೆಚ್ಚುವರಿ ಎಸ್ಪಿ ಅಮರನಾಥ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಬೈಲಹೊಂಗಲದ ಡಿಎಸ್ಪಿ ಜೆ.ಎಂ.ಕರುಣಾಕರಶೆಟ್ಟಿ ನೇತೃತ್ವದ ತಂಡ ತನಿಖೆ ನಡೆಸಿ ಐವರನ್ನು ಬಂಧಿಸಿದ್ದಾರೆ. ಜತೆಗೆ ಕೃತ್ಯಕ್ಕೆ ಉಪಯೋಗಿಸಿದ್ದ ಮೂರು ಸಿಂಗಲ್ ಬ್ಯಾರಲ್ ಬಂದೂಕು, ಕಾಡತೂಸು ಮತ್ತು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಸೋಮವಾರ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. | ಲಕ್ಷ್ಮಣ ನಿಂಬರಗಿ ಎಸ್ಪಿ, ಬೆಳಗಾವಿ