ವಿತರಣೆಗಾಗಿ ಅರಣ್ಯ ಇಲಾಖೆಯಿಂದ ಸಸ್ಯಪಾಲನಾ ಕ್ಷೇತ್ರದಲ್ಲಿ ಬೆಳೆಸಲಾದ ವಿವಿಧ ಜಾತಿಯ ಸಸಿಗಳು. 
ಜಿಲ್ಲೆ

ಅರಣ್ಯ ಇಲಾಖೆಯಲ್ಲಿ ಸಸಿಗಳು ರೆಡಿ : ಸುಬ್ರಹ್ಮಣ್ಯದಲ್ಲಿ ವನ ಸಮೃದ್ಧಿ ಯೋಜನೆ : 1,97,148 ಗಿಡಗಳು ಸಿದ್ಧ

ಸೌಮ್ಯ ಆರ್

ರತ್ನಾಕರ ಸುಬ್ರಹ್ಮಣ್ಯ

ಹಸಿರು ಸಮೃದ್ಧಿಗಾಗಿ ಸುಬ್ರಹ್ಮಣ್ಯ ಉಪಅರಣ್ಯ ವಲಯದಲ್ಲಿ ಅರಣ್ಯ ಇಲಾಖೆ ವತಿಯಿಂದ ಅತ್ಯುತ್ತಮ ಯೋಜನೆ ಸಿದ್ಧವಾಗಿದೆ. ಮಳೆಗಾಲದಲ್ಲಿ ವಿವಿಧ ರೀತಿಯ ಸಸ್ಯಗಳನ್ನು ವಿತರಿಸಿ ಆ ಮೂಲಕ ಹಸಿರುಮಯವನ್ನಾಗಿಸಲು ಈ ವರ್ಷ ಅರಣ್ಯ ಇಲಾಖೆ 1,97,148 ಗಿಡಗಳನ್ನು ಬೆಳೆಸಿದೆ. ಸುಳ್ಯ, ಸುಬ್ರಹ್ಮಣ್ಯ ಮತ್ತು ಪಂಜ ವಲಯಗಳನ್ನೊಳಗೊಂಡ ಸುಬ್ರಹ್ಮಣ್ಯ ಉಪವಿಭಾಗದ ಇಲಾಖೆಯ ಸಸ್ಯ ಕಾಶಿಗಳಲ್ಲಿ ಸಸಿಗಳನ್ನು ಬೆಳೆಸಲಾಗಿದೆ.

ಇದರಲ್ಲಿ ಅರ್ಧದಷ್ಟು ಗಿಡಗಳನ್ನು ಅರಣ್ಯ ಇಲಾಖೆಯ ನೆಡುತೋಪುಗಳಲ್ಲಿ ನೆಡಲಾಗುವುದು. ಉಳಿದ ಗಿಡಗಳನ್ನು ರಿಯಾಯಿತಿ ದರದಲ್ಲಿ ಸಾರ್ವಜನಿಕರಿಗೆ ವಿತರಿಸಲಾಗುವುದು. ವನರಾಶಿಯ ಸಮೃದ್ಧಿಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲು ಅರಣ್ಯ ಇಲಾಖೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ. ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಈ ಸಸಿಗಳನ್ನು ವಿತರಿಸಿ ಅರಣ್ಯ ಸಮೃದ್ಧಿಗೆ ಇಲಾಖೆ ಸಿದ್ಧವಾಗಿದೆ.

50ಕ್ಕೂ ಅಧಿಕ ವಿಧದ ಸಸ್ಯಗಳು

ಸಸ್ಯ ಪಾಲನಾ ಕ್ಷೇತ್ರಗಳಲ್ಲಿ 50ಕ್ಕೂ ಅಧಿಕ ಜಾತಿಯ ಸಸಿಗಳನ್ನು ಪೋಷಿಸಲಾಗಿದೆ. ಬೆತ್ತ, ನೇರಳೆ, ಕೋಳಿ ಜುಟ್ಟು, ಹೊಳೆ ದಾಸವಾಳ, ಶ್ರೀಗಂಧ ಸೇರಿದಂತೆ 50ಕ್ಕೂ ಅಧಿಕ ಬಗೆಯ ಸಸಿಗಳು ಇಲ್ಲಿ ಬೆಳೆದು ನಿಂತಿವೆ. ಜತೆಗೆ 25 ಸಾವಿರದಷ್ಟು ಗಿಡಗಳು ಮೊಳಕೆ ಹಂತದಲ್ಲಿವೆ.

ಪ್ರೋತ್ಸಾಹ ಯೋಜನೆ

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ಗಿಡಗಳ ವಿತರಣೆಯಾಗಲಿದ್ದು, ಇದರ ಪ್ರಕಾರ ಕೃಷಿಕ ತನ್ನ ಖಾಲಿ ಜಮೀನಿನಲ್ಲಿ ಗಿಡ ನೆಟ್ಟು ಬೆಳೆಸಬೇಕು. ಕೃಷಿಕ ನೆಟ್ಟ ಗಿಡಕ್ಕೆ ಸರ್ಕಾರ ಪ್ರೋತ್ಸಾಹ ಧನ ನೀಡುತ್ತದೆ. ಇಲ್ಲಿ ಒಂದು ಹೆಕ್ಟೇರ್‌ಗೆ 400 ಗಿಡ ನೀಡಲಾಗುತ್ತದೆ.

ಪ್ರೋತ್ಸಾಹ ಧನ

ಈ ವರ್ಷ ನೆಟ್ಟ ಗಿಡ ಸಮೃದ್ಧವಾಗಿ ಬೆಳೆದು ಒಂದು ವರ್ಷ ತುಂಬಿದಾಗ ಇಲಾಖೆ ಪ್ರತಿ ಗಿಡಕ್ಕೆ 35 ರೂ.ನಂತೆ ಪ್ರೋತ್ಸಾಹ ಧನ ನೀಡುತ್ತದೆ. ಈ ಬಗ್ಗೆ ಇಲಾಖಾಧಿಕಾರಿಗಳು ಬಂದು ತಪಾಸಣೆ ಮಾಡುತ್ತಾರೆ. ಎರಡನೇ ವರ್ಷ 45 ರೂ., ಮೂರನೇ ವರ್ಷ 50 ರೂ. ಪ್ರೋತ್ಸಾಹ ಧನ ನೀಡುತ್ತದೆ. ಇದರೊಂದಿಗೆ ಮಗುವಿಗೊಂದು ಗಿಡ ಶಾಲೆಗೊಂದು ವನ ಯೋಜನೆಯಡಿಯಲ್ಲಿ ಪ್ರತಿ ವರ್ಷ ಶಾಲೆಗಳಿಗೆ ಮತ್ತು ಶಾಲಾ ಪರಿಸರದಲ್ಲಿ ಗಿಡ ನೆಡಲು ಅರಣ್ಯ ಇಲಾಖೆ ರಿಯಾಯಿತಿ ದರದಲ್ಲಿ ಗಿಡಗಳನ್ನು ನೀಡುತ್ತಿದೆ. ಬೀಜಗಳನ್ನು ವಿವಿಧ ಸ್ಥಳಗಳಲ್ಲಿ ಬಿತ್ತಲಾಗುತ್ತದೆ.

ಸುಬ್ರಹ್ಮಣ್ಯ 80,708

ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯಲ್ಲಿ 80,708 ಸಸಿ ಬೆಳೆಸಲಾಗಿದೆ. ಪಂಜ ವಲಯ ಅರಣ್ಯ ವ್ಯಾಪ್ತಿಯಲ್ಲಿ 61,040 ಸಾವಿರ ವಿವಿಧ ಗಿಡಗಳನ್ನು ಬೆಳೆಸಲಾಗಿದೆ. ಸುಳ್ಯ ವಲಯ ಅರಣ್ಯ ವ್ಯಾಪ್ತಿಯಲ್ಲಿ 55,400 ಗಿಡ ಬೆಳೆಸಲಾಗಿದೆ.

ಕಾರ್ಯತತ್ಪರ ಅಧಿಕಾರಿಗಳ ಚಿಂತನೆ

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಅರಣ್ಯ ಸಂಪತ್ತಿನ ಅಭ್ಯುದಯಕ್ಕೆ ಶ್ರಮ ವಹಿಸುತ್ತಿದ್ದಾರೆ. ಸಸಿಗಳನ್ನು ನೀಡುವುದರೊಂದಿಗೆ ಅರಣ್ಯ ಸಂರಕ್ಷಣೆ ಮತ್ತು ಅವುಗಳನ್ನು ಮಕ್ಕಳಂತೆ ಬೆಳೆಸಿ ಪೋಷಿಸುವ ಕುರಿತು ಸಾರ್ವಜನಿಕರಲ್ಲಿ, ವಿದ್ಯಾರ್ಥಿಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಜಾಗೃತಿ ಕಾರ್ಯಾಗಾರ ಮತ್ತು ಮಾಹಿತಿ ವ್ಯವಸ್ಥೆ ಕೂಡಾ ಆಯೋಜಿಸಲು ಸಿದ್ಧತೆ ಮಾಡಿದ್ದಾರೆ.

ಬೀಜದುಂಡೆ ಬಿತ್ತನೆ

ಔಷಧ ಸಸ್ಯಗಳು, ನಶಿಸಿ ಹೋಗುವ ಸಸ್ಯಗಳು, ವಿವಿಧ ಜಾತಿಯ ಫಲಗಳನ್ನು ನೀಡುವ ಸಸ್ಯಗಳನ್ನು ಬೆಳೆಸಲಾಗಿದೆ. ಇಲ್ಲಿ ಆನೆಗಳ ಸಮಸ್ಯೆ ಇರುವುದರಿಂದ ಹಣ್ಣು ಹಂಪಲು, ಹಲಸು, ಬೈನೆ ಗಿಡಗಳನ್ನು ಹೆಚ್ಚು ಹೆಚ್ಚು ಕಾಡಿನಲ್ಲಿ ಬೆಳೆಸುವ ಉದ್ದೇಶದಿಂದ ಈ ವೃಕ್ಷಗಳ ಬೀಜದುಂಡೆಗಳನ್ನು ತಯಾರಿಸಲಾಗಿದೆ. ಇವುಗಳನ್ನು ಕಾಡಿನೊಳಕ್ಕೆ ಬಿತ್ತಿ ಆ ಮೂಲಕ ಈ ಸಸಿಗಳನ್ನು ಕಾಡಲ್ಲಿ ಹೆಚ್ಚು ಹೆಚ್ಚು ಬೆಳೆಯುವಂತೆ ಮಾಡುವ ಯೋಚನೆ ಮಾಡಲಾಗಿದೆ.

ವಿಶೇಷ ಯೋಜನೆಗಳ ಮೂಲಕ ಸಾರ್ವಜನಿಕರು ಸಸ್ಯಗಳ ಪಾಲನೆ ಹಾಗೂ ಪೋಷಣೆಗೆ ಹೆಚ್ಚು ಆಸಕ್ತಿ ತಳೆಯುವಂತೆ ಮಾಡಲಾಗುತ್ತಿದೆ. ಈ ಬಾರಿ ಬೆಳೆಸಿದ ಗಿಡಗಳನ್ನು ಅರಣ್ಯ ಇಲಾಖೆಯ ನೆಡುತೋಪುಗಳಲ್ಲಿ ನೆಡಲಾಗುವುದು. ಅಲ್ಲದೆ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ನೀಡಲಾಗುವುದು. ಹಣ್ಣಿನ ಬೀಜಗಳ ಉಂಡೆ ತಯಾರಿಸಿ ಕಾಡಿನೊಳಕ್ಕೆ ಬಿತ್ತಿ ಆ ಮೂಲಕ ಹಣ್ಣುಗಳು ದೊರಕುವಂತೆ ಮಾಡಲಾಗುವುದು.- ಪ್ರವೀಣ್ ಕುಮಾರ್ ಶೆಟ್ಟಿಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸುಬ್ರಹ್ಮಣ್ಯ ಉಪ ವಿಭಾಗ https://www.vijayavani.net/pattanaje-celebration-at-enmooru-adhigaradi