ಮಡಿಕೇರಿ:
ಜಿಲ್ಲೆಯ ಮಡಿಕೇರಿ ಬಳಿ ಕೊಡಗು- ಕೇರಳ ಗಡಿ ಭಾಗದ ತಲಕಾವೇರಿ ಆಭಯಾರಣ್ಯದ ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಸಾವಿರಾರು ಮರಗಳ ಅಕ್ರಮ ಕಡಿತಲೆ ಪ್ರಕರಣಕ್ಕೆ ಸಂಬAಧಿಸಿದAತೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅರಣ್ಯ ಇಲಾಖೆ ಸಚಿವ ಈಶ್ವರ ಬಿ. ಖಂಡ್ರೆ ಸೂಚಿಸಿದ್ದಾರೆ. ಈ ಸಂಬAಧ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿರುವ ಸಚಿವರು, ಸಾವಿರಾರು ಮರಗಳ ಅಕ್ರಮ ಹನನ ಆಗಿದ್ದರೂ ಸಚಿವರ ಕಾರ್ಯಾಲಯಕ್ಕೆ ಕೂಡಲೇ ಮಾಹಿತಿ ನೀಡದೇ ಇರುವುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ವೃಕ್ಷ ಸಂಪತ್ತು ಮತ್ತು ವನ್ಯ ಸಂಪತ್ತು ರಕ್ಷಿಸಬೇಕಾದ್ದು ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ವಲಯ ಅರಣ್ಯಾಧಿಕಾರಿ ಹಾಗೂ ಅಧೀನ ಸಿಬ್ಬಂದಿಯ ಆದ್ಯ ಕರ್ತವ್ಯ ಆಗಿರುತ್ತದೆ. ಮರಗಳ ಅಕ್ರಮ ಹನನ ಕುರಿತು ಮೇ 10ರಂದು ಸಿಸಿಎಫ್‌ಗಳು ಸದಸ್ಯರಾಗಿರುವ ವಾಟ್ಸ್ ಅಪ್ ಗ್ರೂಪ್ ನಲ್ಲಿ ಸಚಿವರ ಕಚೇರಿ ಆಪ್ತ ಸಿಬ್ಬಂದಿ ಪೋಸ್ಟ್ ಮಾಡಿ ಗಮನ ಸೆಳೆದಿದ್ದರೂ, ಯಾವುದೇ ಮಾಹಿತಿ ನೀಡಲಾಗಿರುವುದಿಲ್ಲ. ಇದು ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪವಾಗಿರುತ್ತದೆ.\
ಕೂಡಲೇ ಎ.ಪಿ.ಸಿ.ಸಿ.ಎಫ್. ದರ್ಜೆಯ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ ಎಷ್ಟು ಮರಗಳನ್ನು ಕಡಿಯಲಾಗಿದೆ ಎಂಬ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ, ವಾಸ್ತವ ವರದಿಯನ್ನು ಜಿಪಿಎಸ್ ಮತ್ತು ವಿಡಿಯೋ ಸಹಿತ, 3 ದಿನಗಳ ಒಳಗಾಗಿ ತನ್ನ ಕಚೇರಿಗೆ ಸಲ್ಲಿಸಬೇಕು. ನಿರ್ಲಕ್ಷ್ಯ ವಹಿಸಿರುವ ಆರಣ್ಯ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕಾನೂನು ರೀತ್ಯ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಅನುಮತಿ ಇಲ್ಲದೆ ಮರ ಕಡಿದ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸೂಚಿಸಿದ್ದಾರೆ.