ಹುಣಸೂರು: ಕಾಡಿಗಾಗಿ ಜನನ, ಜೀವನ ಮತ್ತು ಮರಣ ಎಂಬ ಧ್ಯೇಯವಾಕ್ಯದೊಂದಿಗೆ ಕರ್ತವ್ಯ ನಿರ್ವಹಿುತ್ತಿರುವ ಅರಣ್ಯ ಸಿಬ್ಬಂದಿಗೆ ನಾವೆಲ್ಲರೂ ಚಿರಋಣಿಯಾಗಿರಬೇಕು ಎಂದು 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಗೋವಿಂದಯ್ಯ ಅಭಿಪ್ರಾಯಪಟ್ಟರು.
ಹುಣಸೂರು ನಗರದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶೆದ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಸಮಾರಂಭದಲ್ಲಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಅರಣ್ಯ ಸಿಬ್ಬಂದಿ ಮತ್ತು ಅಧಿಕಾರಿಗಳು ಅರಣ್ಯವೇ ತಮ್ಮ ಮನೆಯೆಂದು ಭಾವಿಸುತ್ತಾರೆ. ಅವರ ಪರಿಸರ ಸಂರಕ್ಷಣೆಯಿಂದ ನೀರು, ಅನ್ನ ಮಾತ್ರವಲ್ಲ ಉತ್ತಮ ಆಮ್ಲಜನಕವನ್ನೂ ನಮಗೆ ನೀಡುತ್ತಿದ್ದಾರೆ. ಅರಣ್ಯದ ಅಸ್ತಿತ್ವಕ್ಕಾಗಿ ಹುತಾತ್ಮರಾದ ವೀರ ಅಭಿಮನ್ಯು ಎಂದೇ ಪ್ರಖ್ಯಾತಿ ಹೊಂದಿ ಅರಣ್ಯ ಅಧಿಕಾರಿ ದಿವಂಗತ ಪಿ.ಶ್ರೀನಿವಾಸ್, ಡಾ.ಎಸ್.ಮಣಿಕಂದನ್ ಮುಂತಾದವರನ್ನು ನಾವೆಲ್ಲರೂ ಸ್ಮರಿಸಬೇಕು. ಈ ದೇಶದ ಪ್ರಜೆಗಳಾಗಿ ಅರಣ್ಯ ಸಂರಕ್ಷಣೆ ಮತ್ತು ಅರಣ್ಯ ಸಿಬ್ಬಂದಿಗೆ ಜತೆಯಾಗಿ ನಾವೂ ಸಹಕಾರ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎ.ಸೀಮಾ ಮಾತನಾಡಿ, ಅರಣ್ಯ ಹುತಾತ್ಮರ ದಿನವನ್ನು ದೇಶದ ಎಲ್ಲ ಭಾಗಗಳಲ್ಲೂ ಆಚರಿಸಲಾಗುತ್ತಿದೆ. ಕಳೆದ 55 ವರ್ಷಗಳಲ್ಲಿ ಅರಣ್ಯ ಮತ್ತು ವನ್ಯಪ್ರಾಣಿಗಳ ಸಂರಕ್ಷಣೆಯಲ್ಲಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು, ಮರಗಳ್ಳರ ಮತ್ತು ಅಕ್ರಮ ಬೇಟೆಗಾರರೊಂದಿಗೆ ಹೋರಾಡಿ ತಮ್ಮ ಜೀವವನ್ನೇ ತ್ಯಾಗ ಮಾಡಿದ ಎಲ್ಲ ಅರಣ್ಯ ಅಧಿಕಾರಿಗಳು ಮತ್ತು ಮುಂಚೂಣಿ ಸಿಬ್ಬಂದಿ ವರ್ಗದವರ ಸ್ಮರಣಿಗಾಗಿ ಹುತಾತ್ಮರ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ಎಸಿಎಫ್)ಎನ್.ಲಕ್ಷ್ಮೀಕಾಂತ್ ಅವರು ರಾಜ್ಯದಲ್ಲಿ ಕರ್ತವ್ಯದ ವೇಳೆ ಮಡಿದ 62ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಮುಂಚೂಣಿ ಸಿಬ್ಬಂದಿ ಹೆಸರನ್ನು ಓದಿ ಗೌರವ ಸಮರ್ಪಿಸಿದರು. ಕವಾಯಿತು ತಂಡದಿಂದ ಗುಂಡು ಹಾರಿಸುವ ಮೂಲಕ ಅರಣ್ಯ ಹುತಾತ್ಮರಿಗೆ ಗೌರವ ಸಮರ್ಪಿಸಲಾಯಿತು ಮತ್ತು ಬ್ಯಾಂಡ್ ನೇತೃತ್ವದಲ್ಲಿ ವಾದ್ಯ ನುಡಿನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ(ಪ್ರಾದೇಶಿಕ) ಮಹಮದ್ ಫಯಾಜುದ್ದೀನ್, ಎಸಿಎಫ್‌ಗಳಾದ ಜೆ.ಅನನ್ಯ ಕುಮಾರ್, ಮಧು, ಮಹದೇವಯ್ಯ, ಪಶು ವೈದ್ಯಾಧಿಕಾರಿ ಡಾ.ರಮೇಶ್, ಆರ್‌ಎಫ್‌ಒಗಳು, ಡಿಆರ್‌ಎಫ್‌ಒಗಳು, ವಾಚರ್‌ಗಳು, ಗಾರ್ಡ್‌ಗಳು, ಕಚೇರಿ ಸಿಬ್ಬಂದಿ ಹಾಜರಿದ್ದರು.