ಆಲಮಟ್ಟಿ: ಅರಣ್ಯ ಇಲಾಖೆಯ ಸಿಬ್ಬಂದಿ ಅರಣ್ಯ ಸಂರಕ್ಷಣೆಯ ಜತೆಗೆ ಅರಣ್ಯ ಬೆಳೆಸುವಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳ ಸಂರಕ್ಷಣೆಗಾಗಿ ಕರ್ತವ್ಯದಲ್ಲಿರುವಾಗ 1966ರಿಂದ ಇಲ್ಲಿಯವರೆಗೆ 56 ಜನ ಅರಣ್ಯ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ ಪಾಟೀಲ ವಿಷಾದ ವ್ಯಕ್ತಪಡಿಸಿದರು.
ಆಲಮಟ್ಟಿಯ ಡ್ಯಾಂ ನರ್ಸರಿಯಲ್ಲಿ ಸೋಮವಾರ ಕೆಬಿಜೆಎನ್‌ಎಲ್ ಉಪವಲಯ ಸಂರಕ್ಷಣಾಧಿಕಾರಿ ಕಚೇರಿ ವತಿಯಿಂದ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಆನೆ ತುಳಿತದಿಂದ ಹುತಾತ್ಮರಾದ ಎಸ್. ಮಣಿಕಂಠನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿ, ಅರಣ್ಯ ಸಿಬ್ಬಂದಿ ಬಲಿದಾನ ಎಂದಿಗೂ ವ್ಯರ್ಥವಾಗುವುದಿಲ್ಲ. ಅವರು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದರು.
ಉಪವಲಯ ಅರಣ್ಯಾಧಿಕಾರಿ ಸತೀಶ ಗಲಗಲಿ ಮಾತನಾಡಿ, ಕರ್ನಾಟಕದ ಒಟ್ಟು ಭೌಗೋಳಿಕ ಪ್ರದೇಶದ ಶೇ. 22ರಷ್ಟು ಅರಣ್ಯವಿದೆ. ಅದರಲ್ಲಿ ಸಹಸ್ರಾರು ವನ್ಯಜೀವಿಗಳು ಆಶ್ರಯ ಪಡೆದಿವೆ ಎಂದರು.
1730 ಸೆಪ್ಟಂಬರ್ 11ರಂದು ಜೋಧಪುರನ ಮಹಾರಾಜ ಅಭಯಸಿಂಗ್‌ನ ಸೈನಿಕರು ಕೆಜರ್ಲಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು ರಾಜನ ಹೊಸ ಅರಮನೆಗೆ ಅವಶ್ಯವಿದ್ದ ಮರಗಳನ್ನು ಕಡಿಯಲು ವಿರೋಧಿಸಿದ ಬಿಷ್ಣೋಯಿ ಸಮುದಾಯದ ಸುಮಾರು 360ಕ್ಕೂ ಅಧಿಕ ಜನರನ್ನು ಕೊಲ್ಲಲಾಯಿತು. ಮರಗಳ ಸಂರಕ್ಷಣೆಗಾಗಿ ಬಲಿದಾನ ಹೊಂದಿದ ಬಿಷ್ಣೋಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರ್ಕಾರ ಈ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಿದೆ ಎಂದರು.
ಅರಣ್ಯ ಗಸ್ತು ವನಪಾಲಕ ಪ್ರವೀಣ ಹಚ್ಯಾಳ ಪಥಸಂಚಲನದ ನೇತೃತ್ವ ವಹಿಸಿ ಗೌರವ ವಂದನೆ ಸಲ್ಲಿಸಿದರು. ಉಪವಲಯ ಅರಣ್ಯಾಧಿಕಾರಿ ಸಂತೋಷ ರಾಠೋಡ, ಗಸ್ತು ವನಪಾಲಕರಾದ ಪ್ರವೀಣ ಹಚ್ಯಾಳ, ಎ.ಎಸ್. ಕಾಳೆ, ನಾಗಪ್ಪ ಹಯ್ಯಳಪ್ಪ, ವಿಜಯಲಕ್ಷ್ಮಿ ರೆಡ್ಡಿ ಇತರರು ಇದ್ದರು.