ಅರಣ್ಯ ಭೂಮಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿ ಸಂಡೂರು ತಾಲೂಕಿನ ತೋರಣಗಲ್ ಹೋಬಳಿ ರಾಜಾಪುರ ಗ್ರಾಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆ ನಡೆಸಿತು. ಜಿಲ್ಲಾ ಅಧ್ಯಕ್ಷ ಬಾದನಹಟ್ಟಿ ಶಿವಶಂಕರ್, ಜಿಲ್ಲಾ ಕಾರ್ಯದರ್ಶಿ ಗಾಳಿ ಬಸವರಾಜ್, ತಾಲೂಕು ಅಧ್ಯಕ್ಷ ಜಿ.ಪಂಪನಗೌಡ, ಸಿಪಿಐ ತಾಲೂಕು ಕಾರ್ಯದರ್ಶಿ ಎ.ಸ್ವಾಮಿ ಇತರರಿದ್ದರು. 
ಜಿಲ್ಲೆ

ಅರಣ್ಯಭೂಮಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸದಿರಿ

Kopala - Desk - Eraveni

ಸಂಡೂರು: ತಾಲೂಕಿನ ತೋರಣಗಲ್ ಹೋಬಳಿ ರಾಜಾಪುರ ಗ್ರಾಮದ ಬಳಿ ಅರಣ್ಯಭೂಮಿ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಬಾರದೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಸೋಮವಾರ ಪ್ರತಿಭಟನೆ ನಡೆಸಿತು.

ಜಿಲ್ಲಾ ಅಧ್ಯಕ್ಷ ಬಾದನಹಟ್ಟಿ ಶಿವಶಂಕರ್ ಮಾತನಾಡಿ, ಅಂತಾಪುರ, ಮೆಟ್ರಿಕಿ, ರಾಜಾಪುರ ಗ್ರಾಪಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ವರ್ಗದವರಿದ್ದಾರೆ. ಬಗರ್‌ಹುಕುಂ ಹಕ್ಕುಪತ್ರಕ್ಕಾಗಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪರಿಶಿಷ್ಟರನ್ನು ಒಕ್ಕಲೆಬ್ಬಿಸಬಾರದೆಂದು ಸುಪ್ರೀಂಕೋರ್ಟಿನ ಅದೇಶವಿದೆ ಎಂದು ಉಪವಲಯ ಅರಣ್ಯಾಧಿಕಾರಿ ಅಲ್ತಾಫ್ ಅವರಿಗೆ ತಿಳಿಸಲಾಗಿದೆ ಎಂದರು.

ಈ.ತುಕಾರಾಮ್ 2008ರಿಂದ ಎಸ್‌ಟಿ ಕೋಟಾದಡಿ ಶಾಸಕರಾಗಿದ್ದರು. ಈಗ ಎಸ್‌ಟಿ ಮೀಸಲಾತಿಯಡಿ ಎಂಪಿಯಾಗಿದ್ದಾರೆ. ತುಕಾರಾಮ್ ಪತ್ನಿ ಅನ್ನಪೂರ್ಣ ಎಸ್ಟಿ ಮೀಸಲಾತಿಯಡಿ ಶಾಸಕರಾಗಿದ್ದಾರೆ. ಆದರೂ, ಇದುವರೆಗೆ ಎಸ್‌ಸಿ, ಎಸ್‌ಟಿ ಸೇರಿದಂತೆ ಇತರರಿಗೆ ಅರಣ್ಯ ಹಕ್ಕುಪತ್ರ ನೀಡಿಲ್ಲ.

ಈಗಲಾದರೂ ಸಂಸದ, ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿ ಯಾವುದೇ ಕಾರಣಕ್ಕೂ ಅರಣ್ಯ ಜಮೀನು ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಬಾರದು. ರೈತರಿಗೆ ಅರಣ್ಯ ಹಕ್ಕಿನಡಿ ಪಟ್ಟಾ ಕೊಡಬೇಕು ಎಂದು ಶಿವಶಂಕರ್ ಒತ್ತಾಯಿಸಿದರು.

ಜಿಲ್ಲಾ ಕಾರ್ಯದರ್ಶಿ ಗಾಳಿ ಬಸವರಾಜ್, ತಾಲೂಕು ಅಧ್ಯಕ್ಷ ಜಿ.ಪಂಪನಗೌಡ, ಸಿಪಿಐ ಕಾರ್ಯದರ್ಶಿ ಎ.ಸ್ವಾಮಿ, ರಾಜಾಪುರ ಗ್ರಾಮ ಘಟಕ ಅಧ್ಯಕ್ಷ ಯರ‌್ರಿಸ್ವಾಮಿ, ಪದಾಧಿಕಾರಿಗಳಾದ ಸಿದ್ದಪ್ಪ, ಪರಮೇಶಿ, ಭೀಮಲಿಂಗ ಮುಂತಾದವರಿದ್ದರು.