ಜಿಲ್ಲೆ

ಕೇರಳ ರಾಜ್ಯದ ಕಸ ಕೊಡಗಿಗೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗಿನಿಂದ ಕೇರಳ ಸಂಪರ್ಕಿಸುವ ಹೆದ್ದಾರಿ ಬದಿಯ ಅರಣ್ಯ ಕಸದ ತೊಟ್ಟಿಯಾಗಿ ಪರಿವರ್ತನೆ ಆಗಿದೆ. ಪಕ್ಕದ ರಾಜ್ಯದಿಂದ ಬರುವ ಪ್ರವಾಸಿಗರು ತಮ್ಮೊಂದಿಗೆ ಕಸವನ್ನೂ ತಂದು ಸುರಿದು ಮರಳುತ್ತಿದ್ದಾರೆ. ವೈದ್ಯಕೀಯ ತ್ಯಾಜ್ಯವನ್ನೂ ಇಲ್ಲಿ ಚೆಲ್ಲಲಾಗುತ್ತಿದೆ. ವನ್ಯ ಪ್ರಾಣಿಗಳು ಇದರ ಸಂಪರ್ಕಕ್ಕೆ ಬಂದರೆ ಅಪಾಯ ತಪ್ಪಿದ್ದಲ್ಲ. ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಇಂಥವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಪಕ್ಕದ ಕೇರಳದಿಂದ ಗಡಿದಾಟಿ ಬರುವ ವಾಹನಗಳಲ್ಲಿ ಅಲ್ಲಿಯ ತ್ಯಾಜ್ಯ ತಂದು ಕರ್ನಾಟಕದ ಗಡಿಯಲ್ಲಿರುವ ಅರಣ್ಯದೊಳಗೆ ಸುರಿಯುವ ದಂಧೆ ಮತ್ತೆ ಶುರುವಾಗಿದೆ. ಆಸ್ಪತ್ರೆ ತ್ಯಾಜ್ಯ ಸೇರಿದಂತೆ ಕೆಲವು ಪಟ್ಟಣಗಳಲ್ಲಿ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡುವ ಜಾಗವನ್ನಾಗಿ ಕೇರಳದವರು ಕರ್ನಾಟಕದ ಮೀಸಲು ಅರಣ್ಯವನ್ನು ಬಳಸಿಕೊಳ್ಳುವುದು ಸಾಮಾನ್ಯವಾಗಿತ್ತು. ವಿಷಯವನ್ನು ಪರಿಸರ ಹೋರಾಟಗಾರರು ಅರಣ್ಯ ಇಲಾಖೆ ಗಮನಕ್ಕೆ ತರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿದ್ದ ಇಲಾಖೆ ಹೆದ್ದಾರಿ ಬದಿಯಲ್ಲಿ ಗಸ್ತು ಹೆಚ್ಚಿಸಿ ಕಸ ಸುರಿಯುವವರ ಮೇಲೆ ಕಣ್ಗಾವಲು ಇಟ್ಟಿತ್ತು. ಕೆಲವು ಪ್ರಕರಣಗಳಲ್ಲಿ ದಂಡ ವಿಧಿಸಿದ ನಂತರ ಈ ದಂಧೆ ಸ್ವಲ್ಪ ಕಡಿಮೆ ಆಗಿತ್ತು.

ಇದೀಗ ಈ ಮಳೆಗಾಲದ ನಂತರ ಮತ್ತೆ ಕೇರಳದ ಕಸ ಕರ್ನಾಟಕದ ಅರಣ್ಯದೊಳಗೆ ಬಂದು ಬೀಳಲಾರಂಭಿಸಿದೆ. ಕೊಡಗಿನಿಂದ ಕೇರಳವನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಒಂದಾದ ವಿರಾಜಪೇಟೆ-ಮಾಕುಟ್ಟ ಮಾರ್ಗದಲ್ಲಿ ಈಗ ಎಲ್ಲೆಂದರಲ್ಲಿ ತ್ಯಾಜ್ಯ ಕಂಡು ಬರುತ್ತಿದೆ. ಪಕ್ಕದ ರಾಜ್ಯದಿಂದ ಕೊಡಗಿಗೆ ಪ್ರವಾಸ ಬರುವವರು ಕನಿಷ್ಠ ಪರಿಸರ ಪ್ರಜ್ಞೆಯನ್ನೂ ತೋರಿಸದರೆ ಅರಣ್ಯ ಇರುವುದೇ ತ್ಯಾಜ್ಯ ಎಸೆಯುವುದಕ್ಕೆ ಎನ್ನುವಂತೆ ವರ್ತಿಸುತ್ತಿದ್ದಾರೆ. ಹಾಗಾಗಿ ಅರಣ್ಯದೊಳಗಿನ ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಸ ಎಸೆದಿರುವುದು ಕಂಡು ಬರುತ್ತಿದೆ.

ಮನುಷ್ಯರು ಬಳಸಿದ ಬರಿ ಕೈಯಲ್ಲಿ ಮುಟ್ಟಲು ಸಾಧ್ಯವಾಗದ ತ್ಯಾಜ್ಯಗಳನ್ನು ಹೀಗೆ ಎಲ್ಲೆಂದರಲ್ಲಿ ಅರಣ್ಯದಂಚಿನ ರಸ್ತೆ ಬದಿಯಲ್ಲಿ ಎಸೆಯುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಾರೆ ಪರಿಸರ ಹೋರಾಟಗಾರರು. ಮಾನವ ಬಳಸಿದ ಬಿಸಾಡಿದ ಪದಾರ್ಥಗಳಿಂದ ಅಮೂಲ್ಯವಾದ ವನ್ಯಪ್ರಾಣಿಗಳ ಆರೋಗ್ಯ ಮತ್ತು ಜೀವಕ್ಕೆ ಹಾನಿ ಉಂಟಾಗುತ್ತದೆ. ವನ್ಯ ಪ್ರಾಣಿಗಳಿಗೆ ಸೋಂಕು ತಗಲಿ ಹರಡಿದರೆ ಇದಕ್ಕೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ವನ್ಯಪ್ರಾಣಿಗಳು ನಾಶವಾದರೆ ಕಾಡುಗಳು ಉಳಿಯುವುದಿಲ್ಲ. ಕೊಡಗಿನ ಶ್ರೀಮಂತ ಪ್ರಾಕೃತಿಕ ಸೌಂದರ್ಯವೂ ಹಾಳಾಗುತ್ತದೆ ಎನ್ನುವುದು ಪರಿಸರಪ್ರಿಯರ ಆತಂಕ.

ಈ ಮಾರ್ಗದಲ್ಲಿ ಮಂಗಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ವನ್ಯ ಪ್ರಾಣಿಗಳಿಗೆ ಆಹಾರ ತಿನ್ನಿಸಬಾರದು ಎಂದು ನಾಮಫಲಕ ಅಳವಡಿಸಿದ್ದರೂ ಪ್ರವಾಸಿಗರು ತಾವು ತಂದಿರುವ ಆಹಾರ ಪದಾರ್ಥಗಳನ್ನು ಮಂಗಗಳಿಗೆ ಕೊಡುವುದು ಸಾಮಾನ್ಯವಾಗಿದೆ. ಇದನ್ನೇ ಅಭ್ಯಾಸ ಮಾಡಿಕೊಂಡಿರುವ ಮಂಗಗಳು ಮನುಷ್ಯರು ಎಸೆದು ಹೋದ ಅಪಾಯಕಾರಿ ತ್ಯಾಜ್ಯಕ್ಕೂ ಬಾಯಿ ಹಾಕುತ್ತಿವೆ. ಇದರಿಂದ ಒಂದು ವೇಳೆ ಸೋಂಕು ಹರಡಿದರೆ ಯಾರು ಹೊಣೆ ಎನ್ನುವ ಪ್ರಶ್ನೆಯೂ ಕೇಳಿಬರುತ್ತಿದೆ. ಮನುಷ್ಯರು ಎಸೆದ ತ್ಯಾಜ್ಯವನ್ನು ಮಂಗಗಳು ಎಳೆದಾಡುವ ವೀಡಿಯೋಗಳನ್ನು ಪರಿಸರ ಪ್ರಿಯರು ಚಿತ್ರೀಕರಿಸಿಕೊಂಡಿದ್ದು, ಸಂಬಂಧಿಸಿದವರ ಗಮನಕ್ಕೂ ತಂದಿದ್ದಾರೆ.

ಅರಣ್ಯದೊಳಗೆ ಹೋಗುವ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಬಾರದು ಎನ್ನುವ ನಿಯಮ ಇದ್ದರೂ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ತಲೆ ಕೆಡಿಸಿಕೊಳ್ಳುವುದಿಲ್ಲ. ವಾಹನಗಳನ್ನು ನಿಲ್ಲಿಸುವುದು ಮಾತ್ರವಲ್ಲದೆ ಆಹಾರ ತಯಾರಿಸುವುದು, ತಾವು ತಂದ ಆಹಾರ ಸೇವಿಸುವುದು, ಫೋಟೋಗ್ರಫಿ, ಮೂತ್ರ ವಿಸರ್ಜನೆ ಮತ್ತಿತರ ಚಟುವಟಕೆಗಳೂ ಸಾಮಾನ್ಯವಾಗಿದೆ. ಇಂತಹ ಕೃತ್ಯಗಳಿಂದ ಮನುಷ್ಯನಿಗೆ ಮಾತ್ರ ಅಪಾಯವಲ್ಲ, ವನ್ಯಜೀವಿಗಳಿಗೂ ತೊಂದರೆ ಎದುರಾಗುವ ಸಾಧ್ಯತೆ ಇರುತ್ತದೆ. ಅರಣ್ಯ ಇಲಾಖೆ ನಿಯಮಿತವಾಗಿ ಗಸ್ತು ತಿರುಗುವುದರಿಂದ ಪ್ರಯಾಣಿಕರ ಈ ರೀತಿಯ ಆಟಾಟೋಪಗಳಿಗೆ ಕಡಿವಾಣ ಹಾಕಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಪಕ್ಕದ ರಾಜ್ಯದ ತ್ಯಾಜ್ಯ ಸಾಮಾನ್ಯವಾಗಿ ರಾತ್ರಿ ವೇಳೆಯೇ ಕರ್ನಾಟಕದ ಗಡಿಯೊಳಗೆ ಬಂದು ಸೇರುತ್ತದೆ. ರಾತ್ರಿ ವೇಳೆ ಈ ವ್ಯಾಪ್ತಿಯಲ್ಲಿ ಓಡಾಡುವ ಪ್ರಯಾಣಿಕರು ಕೂಡ ಗಮನಿಸುವವರು ಯಾರು ಇಲ್ಲ ಎನ್ನುವ ಕಾರಣಕ್ಕೆ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಹಾಗಾಗಿ ಇಲ್ಲಿ ರಾತ್ರಿ ಸಂಚಾರ ನಿಷೇಧಿಸಬೇಕು ಎನ್ನುವ ಕೂಗು ಕೂಡ ಇದೆ. ಬಂಡೀಪುರ ಅರಣ್ಯದೊಳಗೆ ಹಾದುಹೋಗುವ ಹೆದ್ದಾರಿಗಳಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ಇಲ್ಲ. ಅದೇ ನಿಯಮವನ್ನು ಕೊಡಗಿನಲ್ಲೂ ಜಾರಿಗೆ ತರಬೇಕು ಎಂದು ಒತ್ತಾಯಿಸಲಾಗುತ್ತಿದೆ. ಇದರಿಂದ ಅರಣ್ಯ ಪ್ರದೇಶದೊಳಗೆ ಕಸ ಎಸೆಯುವುದಕ್ಕೆ ಕಡಿವಾಣ ಬೀಳುತ್ತದೆ. ಜತೆಗೆ ವನ್ಯ ಪ್ರಾಣಿಗಳ ನಿರ್ಭಯ ಸಂಚಾರಕ್ಕೂ ಅವಕಾಶ ಕಲ್ಪಿಸಿದಂತಾಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಕೊಡಗಿನಲ್ಲಿ ವನ್ಯಜೀವಿಧಾಮ ಅರಣ್ಯಗಳ ಮೂಲಕ ಹಾದುಹೋಗುವ ರಸ್ತೆಗಳಲ್ಲಿ ಸಂಚರಿಸುವವರು ಅರಣ್ಯ ಇಲಾಖೆಗೆ ಹಣ ಕೊಟ್ಟು ಪ್ರಯಾಣಿಸಬೇಕು. ಅಂತಾರಾಜ್ಯ ವಾಹನಗಳಿಗೆ ಮಾತ್ರ ಇಲ್ಲಿ ಶುಲ್ಕ ವಿಧಿಸಲಾಗುವುದು ಎಂದು ಆರಂಭದಲ್ಲಿ ಅಧಿಕಾರಿಗಳು ಹೇಳಿದ್ದರು. ಆದರೆ ನಂತರದ ದಿನಗಳಲ್ಲಿ ಸ್ಥಳೀಯರ ವಾಹನಗಳಿಂದಲೂ ಹಣ ಪಡೆದುಕೊಳ್ಳಲಾಗುತ್ತಿದೆ. ಈ ಮೊತ್ತವನ್ನು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಇದು ಪರಸರ ಉಳಿವಿಗೆ ಪ್ರಯಾಣಿಕರ ಚಿಕ್ಕ ಕೊಡುಗೆಯಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿಕೊಂಡಿದ್ದರು. ಜಿಲ್ಲೆಯ ಆನೆಚೌಕೂರು, ಮಾಲ್ದಾರೆ, ಕುಟ್ಟ, ನಾಗರಹೊಳೆ, ಬೇಗೂರು, ಕಾರ್ಮಾಡು, ಮಾಕುಟ್ಟ, ತಲಕಾವೇರಿ ವನ್ಯಧಾಮದ ಭಾಗಮಂಡಲ, ಕರಿಕೆ ಸೇರಿದಂತೆ ವನ್ಯಧಾಮ ಮೂಲಕ ಹಾದುಹೋಗುವ ಪ್ರಯಾಣಿಕರು ಅರಣ್ಯ ಇಲಾಖೆ ನಿಗದಿ ಮಾಡಿರುವ ಶುಲ್ಕ ಪಾವತಿಸಿ ಮುಂದಕ್ಕೆ ಪ್ರಯಾಣಿಸಬೇಕು. ಕಾರು, ಜೀಪ್ ಸೇರಿದಂತೆ ಲಘು ವಾಹನಗಳಿಗೆ ೨೦ ರೂ., ಲಾರಿ, ಬಸ್ ಸೇರಿದಂತೆ ಭಾರಿ ವಾಹನಗಳಿಗೆ ೫೦ ರೂ. ಶುಲ್ಕ ನಿಗದಿ ಮಾಡಲಾಗಿದೆ. ಕೇರಳ ರಾಜ್ಯದ ವಾಹನಗಳಲ್ಲಿ ವೈದ್ಯಕೀಯ ತ್ಯಾಜ್ಯವಸ್ತುಗಳು, ಪ್ಲಾಸ್ಟಿಕ್ ವಸ್ತುಗಳು ಮತ್ತು ಇತರೆ ವಸ್ತುಗಳನ್ನು ಅರಣ್ಯ ಪ್ರದೇಶಗಳಲ್ಲಿ ಹಾಕಿ, ಇದನ್ನು ವನ್ಯಪ್ರಾಣಿಗಳು ಸೇವಿಸಿ ಸಾವನ್ನಪ್ಪಿರುವ ಘಟನೆಗಳು ವರದಿಯಾದ ಹಿನ್ನೆಲೆ ಇದಕ್ಕೆ ಕಡಿವಾಣ ಹಾಕುವ ಪ್ರಮುಖ ಉದ್ದೇಶದಿಂದ ಜಿಲ್ಲೆಯೊಳಗೆ ಬರುವ ಅಂತಾರಾಜ್ಯ ವಾಹನಗಳನ್ನು ತಪಾಸಣೆ ಮಾಡಿ ನಿರ್ವಹಣಾ ಶುಲ್ಕ ವಿಧಿಸಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ಹೇಳಿಕೊಂಡಿದ್ದರು. ಆದರೆ ಹೀಗೆ ಸಂಗ್ರಹಿಸುವ ಶುಲ್ಕ ಈಗ ಏನಾಯಿತು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ವನ್ಯಧಾಮ ಅರಣ್ಯದ ರಸ್ತೆಗಳಲ್ಲಿ ಓಡಾಡುವ ಪ್ರಯಾಣಿಕರ ಸ್ವೇಚಾಚ್ಛಾರಕ್ಕೆ ಕಡಿವಾಣ ಹಾಕುವ ಕೆಲಸ ಆಗಬೇಕು. ಈ ಹಿಂದೆಯೂ ಕೇರಳದ ತ್ಯಾಜ್ಯ ರಾಜ್ಯದ ಅರಣ್ಯಗಳಲ್ಲಿ ತಂದು ಸುರಿಯುವ ಸಂದರ್ಭ ಅರಣ್ಯ ಇಲಾಖೆ ಕಠಿಣ ಕ್ರಮ ತೆಗೆದುಕೊಂಡಿತ್ತು. ಅದೇ ರೀತಿಯಲ್ಲಿ ಈಗಲೂ ಕಸ ತಂದು ಸುರಿಯುವವರ ಮೇಲೆ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಇದು ಹೀಗೆಯೇ ಮುಂದುವರಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಹೊದ್ದೇಟಿ ಸುಧೀರ್, ಕರಿಕೆ ನಿವಾಸಿ

ವಿಷಯ ನಮ್ಮ ಗಮನಕ್ಕೂ ಬಂದಿದೆ. ಒಂದು ತಂಡ ಮಾಡಿ ಎಲ್ಲವನ್ನೂ ಸ್ವಚ್ಛ ಮಾಡಲಾಗುತ್ತಿದೆ. ಇಂಥವರಿಂದ ದಂಡ ವಸೂಲಿ ಮಾಡಲೂ ಕ್ರಮ ತೆಗೆದುಕೊಳ್ಳಲಾಗಿದೆ. ಒಂದು ತಂಡ ರಚಿಸಿ ರಸ್ತೆಯಲ್ಲಿ ಗಸ್ತು ಮಾಡಿಸಲಾಗುವುದು. ನಾವು ಎಷ್ಟು ಸ್ವಚ್ಛ ಮಾಡಿದರೂ ಮತ್ತೆ ಮತ್ತೆ ಕಸ ಹಾಕುತ್ತಿದ್ದಾರೆ. ಪ್ರವೇಶದ್ವಾರದಲ್ಲೂ ಚೆಕ್‌ಪೋಸ್ಟ್ ಮಾಡಿ ತಪಾಸಣೆ ನಡೆಸಿ ಬಿಡುತ್ತಿದ್ದೇವೆ. ಕೇರಳದಿಂದ ಬರುವವರು ಕಸ ಹಾಕುವುದು ಸ್ವಲ್ಪ ಕಡಿಮೆ ಆಗಿದೆ. ಇತ್ತ ಕಡೆಯಿಂದ ಹೋಗುವವರನ್ನು ತಪಾಸಣೆ ಮಾಡಿ ಬಿಡಬೇಕು. ವಾರದಲ್ಲಿ ೨ ಬಾರಿ ರಸ್ತೆ ಬದಿ ಸ್ವಚ್ಛ ಮಾಡಲಾಗುತ್ತಿದೆ. ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.
ಶಿವರಾಮ್ ಬಾಬು, ಡಿಸಿಎಫ್, ವನ್ಯಜೀವಿ ವಿಭಾಗ