ಶ್ರವಣ್‌ಕುಮಾರ್ ನಾಳ, ಮಂಗಳೂರು
ಮಾರ್ಚ್ ತಿಂಗಳಲ್ಲಿ ಪಶ್ಚಿಮಘಟ್ಟದ ಸುತ್ತಮುತ್ತಲಿನ ಕಾಡು ಸಹಿತ 8 ಬೆಟ್ಟಗಳಲ್ಲಿ ನಾಲ್ಕಕ್ಕೂ ಅಧಿಕ ಬಾರಿ ಬೆಂಕಿ ಕಾಣಿಸಿಕೊಂಡಿದ್ದು, ಇದು ಮಾನವ ನಿರ್ಮಿತ ಎಂಬುದು ಅರಣ್ಯ ಇಲಾಖೆ ಆಂತರಿಕ ತನಿಖೆಯಲ್ಲಿ ಕಂಡುಬಂದಿದೆ.
ಇತ್ತೀಚೆಗೆ ಪ್ರಾಕೃತಿಕ ವಿಕೋಪ ತಡೆ ಹಾಗೂ ನಿರ್ವಹಣೆ ಬಗ್ಗೆ ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಅರಣ್ಯ ಇಲಾಖೆ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಇಲಾಖೆ ಮಾಹಿತಿ ಪ್ರಕಾರ, ಈ ಬಾರಿ ಶೋಲಾ ಅರಣ್ಯ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಶೇ.30ರಷ್ಟು ಗ್ರಾಸ್‌ಲ್ಯಾಂಡ್ ಬೆಂಕಿಗಾಹುತಿಯಾಗಿದೆ. ಇದರಲ್ಲಿ ಬಹುತೇಕ ಕಾಡ್ಗಿಚ್ಚು ಮಾನವ ನಿರ್ಮಿತ.
ಈ ಬಾರಿ ಪಶ್ಚಿಮ ಘಟ್ಟದ ಅರಣ್ಯ ಭಾಗದ 697 ಕಡೆ, ಅರಣ್ಯ ವ್ಯಾಪ್ತಿಯ ಹೊರಭಾಗದ 127 ಕಡೆ ಬೆಂಕಿ ಬಿದ್ದಿದೆ. ಕಾಡಿಗೆ ಅಕ್ರಮ ಪ್ರವೇಶ ಸೇರಿದಂತೆ ಪೂರ್ಣ ಪ್ರಮಾಣದ ಕಣ್ಗಾವಲಿಗಾಗಿ ಜಿಪಿಎಸ್ ಆಧಾರಿತ ಟ್ಯಾಪಿಂಗ್ ಕ್ಯಾಮರಾ ಅಳವಡಿಸಬೇಕಾಗಿದೆ. ಜಿಲ್ಲಾಧಿಕಾರಿ ಅನುಮೋದನೆ ಬಳಿಕ ಅಳವಡಿಸಲು ಇಲಾಖೆ ಯೋಜನೆ ರೂಪಿಸಿದೆ. ಈ ವ್ಯವಸ್ಥೆಯಿಂದ ಕಾಡಿನಲ್ಲಿ ಬೆಂಕಿ ಬಿದ್ದ ಜಾಗವನ್ನು ನಿಖರವಾಗಿ ಪತ್ತೆ ಹಚ್ಚಲು ಸಾಧ್ಯ. ಅಕ್ರಮ ಪ್ರವೇಶವನ್ನೂ ನಿಯಂತ್ರಿಸಬಹುದಾಗಿದೆ.
ಸ್ಥಳೀಯರಿಗೆ ಇಲಾಖೆಯಿಂದ ಬೆದರಿಕೆ?
ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಗ್ರಾಸ್‌ಲ್ಯಾಂಡ್ ವರ್ಷಂಪ್ರತಿ ಮಾರ್ಚ್ ವೇಳೆ ಸಂಪೂರ್ಣ ಒಣಗುತ್ತದೆ. ಮಳೆಗಾಲಕ್ಕೆ ಮುಂಚಿತವಾಗಿ ಪಶ್ಚಿಮಘಟ್ಟದಲ್ಲಿ ಬರುವ ಅಕಾಲಿಕ ಮಳೆಗೆ ಚಿಗುರೊಡೆಯುತ್ತದೆ. ನಂತರ ಮೇ ಕೊನೆಯ ವಾರ ಅಥವಾ ಜೂನ್‌ನಲ್ಲಿ ಬರುವ ವಾಡಿಕೆ ಮಳೆ ಗುಡ್ಡದ ಇಳಿಜಾರಿನಲ್ಲಿ ಹರಿಯದಂತೆ ಹುಲ್ಲುಗಾವಲು ತಡೆಯುತ್ತದೆ. ತಡೆದ ನೀರು ಭೂರಂಧ್ರಗಳ ಮೂಲಕ ಅಂತರ್ಜಲ ಸೇರುತ್ತದೆ. ಆದರೆ ಈ ಬಾರಿ ಸತತವಾಗಿ ಬಿದ್ದ ಕಾಡ್ಗಿಚ್ಚಿಗೆ ಚಾರ್ಮಾಡಿ ಘಾಟ್ ಭಾಗದ ಶೇ.30ರಷ್ಟು ಗ್ರಾಸ್‌ಲ್ಯಾಂಡ್ ಬೆಂಕಿಗಾಹುತಿಯಾಗಿದೆ. ಸ್ಥಳೀಯ ಮಾಹಿತಿ ಪ್ರಕಾರ, ಪಶ್ಚಿಮಘಟ್ಟದ 8 ಬೆಟ್ಟಗಳಿಗೆ ತಿಂಗಳೊಳಗೆ ಐದಾರು ಬಾರಿ ಬೇಟೆಗಾರರು ಬೆಂಕಿ ಹಚ್ಚಿ ಬೇಟೆಯಾಡಿದ್ದಾರೆ. ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ, ವನ್ಯಜೀವಿ ವಿಭಾಗಕ್ಕೆ ಮಾಹಿತಿ ನೀಡಿದ್ದರೂ, ಕೂಂಬಿಂಗ್ ನೆಪದಲ್ಲಿ ಬೆದರಿಕೆ ಒಡ್ಡಲಾಗಿತ್ತು ಎಂಬುದು ಸ್ಥಳೀಯರ ಆರೋಪ.
ಬೆಂಕಿ ಹಚ್ಚುವುದು ಏಕೆ?
ಅರಣ್ಯ ಇಲಾಖೆ ವರದಿಯಲ್ಲಿ ಶೇ.80ರಷ್ಟು ಬೆಂಕಿ ಅನಾಹುತಕ್ಕೆ ಮಾನವರೇ ಕಾರಣ. ಉಳಿದಂತೆ ಶೇ.10ರಷ್ಟು ಪ್ರಾಣಿಗಳ ಓಡಾಟದಿಂದ ಸಂಭವಿಸುವ (ಅನಿಮಲ್ ಲೈನ್)ಬೆಂಕಿ, ಶೇ.10ರಷ್ಟು ಅಚಾನಕ್ಕಾಗಿ ಕಾಣಿಸಿಕೊಂಡ ಬೆಂಕಿ ಕಾರಣ ಎಂದು ಉಲ್ಲೇಖಿಸಲಾಗಿದೆ. ಅರಣ್ಯ ವ್ಯಾಪ್ತಿಯ ಸಮೀಪ ವಾಸಿಸುತ್ತಿರುವ ಜನರು ತಮ್ಮ ಕೃಷಿ ಚಟುವಟಿಕೆಗಳಿಗೆ ಕಾಡುಪ್ರಾಣಿಗಳ ಉಪಟಳ ತಡೆಯಲು ಬೆಂಕಿ ಹಚ್ಚಿದ್ದಾರೆ. ಜತೆಗೆ ಕಾಡುತ್ಪತ್ತಿ, ಬೇಟೆಗಾಗಿಯೂ ಹಲವರು ಬೆಂಕಿ ಹಚ್ಚಿದ್ದಾರೆ. ಪ್ರಾಣಿಗಳ ಚಲನವಲನ ತಿಳಿದಿರುವ ಬೇಟೆಗಾರರು ಒಂದು ಬಾಗದ ಕಾಡಿಗೆ ಬೆಂಕಿ ಹಚ್ಚಿ ಮತ್ತೊಂದೆಡೆ ಕಾದು ಕುಳಿತು ಬೇಟೆಯಾಡುತ್ತಾರೆ. ಈ ಬೆಂಕಿ ಕಾಡಿಗೆ ಹಬ್ಬಿದೆ ಎಂದು ಇಲಾಖೆ ವರದಿಯಲ್ಲಿ ಉಲ್ಲೇಖಿಸಿದೆ.
ಇನ್ನೂರು ಹೆಕ್ಟೇರ್‌ಗೂ ಅಧಿಕ ವ್ಯಾಪ್ತಿಯಲ್ಲಿ ಈ ಬಾರಿ ಕಾಡ್ಗಿಚ್ಚು ಕಾಣಿಸಿಕೊಂಡು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಅರಣ್ಯ ವ್ಯಾಪ್ತಿಯಲ್ಲಿ ಒಂದು ಕಿ.ಮೀ.ಸುತ್ತ ಇರುವವರನ್ನೂ ನಿಖರವಾಗಿ ಪತ್ತೆ ಹಚ್ಚಬಹುದಾದ ಟ್ಯಾಪಿಂಗ್ ಕ್ಯಾಮರಾ ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದ್ದು, ಸರ್ಕಾರದ ಅನುಮತಿಯ ನಿರೀಕ್ಷೆಯಲ್ಲಿದ್ದೇವೆ.
ದಿನೇಶ್ ಕುಮಾರ್ ವೈ.ಕೆ
ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಇಲಾಖೆ, ದ.ಕ