ಜಿಲ್ಲೆ

ಆನೆಕಾಡು ಅರಣ್ಯಕ್ಕೆ ಕಾಳ್ಗಿಚ್ಚು ಭೀತಿ

reportermys

ಮಡಿಕೇರಿ: ಅತೀ ಹೆಚ್ಚು ಕಾಳ್ಗಿಚ್ಚಿನ ಆತಂಕ ಹೊಂದಿರುವ ಆನೆ ಕಾಡು ಅರಣ್ಯ ಈ ಬಾರಿಯೂ ಸುರಕ್ಷಿತವಾಗಿಯೇನೂ ಇಲ್ಲ. ಅರಣ್ಯ ಇಲಾಖೆ ಸಾಕಷ್ಟು ಮುಂಜಾಗ್ರತೆ ವಹಿಸಿದ್ದರೂ ಈ ಅರಣ್ಯದ ಮಧ್ಯೆ ಹಾದುಹೋಗಿರುವ ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಅಪಾಯಕಾರಿಯಾಗಿದೆ. ಇಲ್ಲಿ ಓಡಾಡುವ ಪ್ರಯಾಣಿಕರ ಎಡವಟ್ಟುಗಳಿಂದ ಕಾಳ್ಗಿಚ್ಚು ಹರಡುವ ಸಾಧ್ಯತೆ ಹೆಚ್ಚಾಗಿದೆ.


೨೦೧೭ರ ಮಾ.೩,೪ ಹಾಗೂ ೫ ಮತ್ತು ೨೦೧೮ರ ಮಾ.೨,೩ರಂದು ಆನೆಕಾಡು ಅರಣ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿತ್ತು. ೨೦೧೭ರಲ್ಲಿ ಏಕಾಏಕಿ ಅಗ್ನಿಯ ಕೆನ್ನಾಲಗೆ ಹರಡಿದ್ದರಿಂದ ನಿಯಂತ್ರಣಕ್ಕೆ ಸಾಕಷ್ಟು ಶ್ರಮ ಪಡಬೇಕಾಯಿತು. ಮೂರು ದಿನಗಳ ಕಾಲ ಸುಮಾರು ೮೦ ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿತ್ತು.
ಅಮೂಲ್ಯ ಮರಗಳು, ಬಿದಿರು, ಪ್ರಾಣಿ-ಪಕ್ಷಿಗಳು ಬೆಂಕಿಗೆ ಆಹುತಿ ಆಗಿದ್ದವು. ರಾಷ್ಟ್ರೀಯ ಹೆದ್ದಾರಿ ೨೭೫ರ ಎರಡೂ ಬದಿಯೂ ಆಕಾಶದೆತ್ತರಕ್ಕೆ ಬೆಂಕಿ ಹರಡಿ ಅಪಾಯಕಾರಿ ವಾತಾವರಣ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನೂ ನಿಷೇಧಿಸಲಾಗಿತ್ತು. ಇನ್ನೇನು ಜನವಸತಿ ಪ್ರದೇಶಕ್ಕೂ ಕಾಳ್ಗಿಚ್ಚು ಹರಡುತ್ತದೆ ಎನ್ನುವ ಸ್ಥಿತಿ ಕಂಡುಬರುತ್ತಿದ್ದಂತೆಯೇ ಅದೃಷ್ಟವಶಾತ್ ಅಗ್ನಿಯ ರುದ್ರ ನರ್ತನ ನಿಯಂತ್ರಣಕ್ಕೆ ಬಂದಿತ್ತು. ೨೦೧೮ರಲ್ಲೂ ಇಂತಹದ್ದೇ ಪರಿಸ್ಥಿತಿ ಎದುರಾಗಿತ್ತು.


ನಂತರದ ವರ್ಷಗಳಲ್ಲಿ ಅರಣ್ಯ ಮತ್ತು ಅಗ್ನಿಶಾಮಕ ಸಿಬ್ಬಂದಿ ಸೂಕ್ತ ಸಮಯದಲ್ಲಿ ಎಚ್ಚೆತ್ತುಕೊಂಡಿದ್ದರಿಂದ ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿರಲಿಲ್ಲ. ಇದೀಗ ಮತ್ತೆ ಬೇಸಿಗೆ ಶುರುವಾಗಿದ್ದು ಸಹಜ ಪ್ರಕ್ರಿಯೆಯಂತೆ ಈಗಾಗಲೇ ಈ ಜಾಗದಲ್ಲಿ ಮರಗಳು ಎಲೆ ಉದುರಿಸಿ ಬೋಳು ಬೋಳಾಗಿ ನಿಂತಿವೆ. ಬಿದ್ದ ಎಲೆ, ಕುರುಚಲು ಕಾಡು ಒಣಗಿರುವುದರಿಂದ ಬೆಂಕಿ ಹರಡುವುದಕ್ಕೆ ಪೂರಕ ವಾತಾವರಣ ನಿರ್ಮಾಣ ಆಗಿದೆ. ಬಿಸಿಲಿನ ಝಳವೂ ಹೆಚ್ಚು ಇರುವುದರಿಂದ ಈ ಬಾರಿ ಆತಂಕ ಸ್ವಲ್ಪ ಹೆಚ್ಚೇ ಇದೆ.
ಈ ಹಿಂದಿನ ಅನುಭವಗಳಿಂದ ಅರಣ್ಯ ಇಲಾಖೆ ಸೂಕ್ತ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಈಗಾಗಲೇ ಅರಣ್ಯದಂಚಿನಲ್ಲಿ ಅಗ್ನಿರೇಖೆ ಎಳೆಯಲಾಗಿದೆ.

ವಿಶೇಷ ಸಿಬ್ಬಂದಿ ಅರಣ್ಯದೊಳಗೆ ಮತ್ತು ವಿಶೇಷವಾಗಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗಸ್ತು ತಿರುಗುತ್ತಿದ್ದಾರೆ. ನೀರು ತುಂಬಿಸಿಕೊಂಡು ಟ್ಯಾಂಕರ್‌ಗಳನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳಲಾಗಿದೆ. ಎಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡರೂ ಅಲ್ಲಿಗೆ ಸುಲಭ ಮತ್ತು ಶೀಘ್ರವಾಗಿ ತಲುಪು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಆನೆಕಾಡು ಅರಣ್ಯದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ೨೭೫ರಲ್ಲಿ ರಸ್ತೆ ಬದಿ ವಾಹನಗಳನ್ನು ನಿಲ್ಲಿಸುವುದಕ್ಕೆ ನಿಷೇಧ ಹೇರಲಾಗಿದೆ. ಆದರೂ ಇಲಾಖೆ ಸಿಬ್ಬಂದಿ ಕಣ್ತಪ್ಪಿಸಿ ಈ ವ್ಯಾಪ್ತಿಯಲ್ಲಿ ತಂಪಾದ ವಾತಾವರಣ ಇರುತ್ತದೆ ಎನ್ನುವ ಕಾರಣಕ್ಕೆ ಸಾಕಷ್ಟು ಪ್ರಯಾಣಿಕರು ತಮ್ಮ ವಾಹನಗಳನ್ನು ಇಲ್ಲಿಯೇ ನಿಲ್ಲಿಸಿ ವಿಶ್ರಾಂತಿ ತೆಗೆದುಕೊಳ್ಳುವುದು, ಮೂತ್ರ ವಿಸರ್ಜನೆ ಮಾಡುವುದು, ಧೂಮಪಾನ-ಮದ್ಯಪಾನ ಮಾಡುವುದು ಕಂಡುಬರುತ್ತಿದೆ.


ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಮಧ್ಯೆಯೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ವಾಹನಗಳನ್ನು ವ್ಯವಸ್ಥೆ ಮಾಡಿ ದಿನದ ೨೪ ಗಂಟೆಯೂ ಕಣ್ಗಾವಲಿಗೆ ಅರಣ್ಯ ವೀಕ್ಷಕರನ್ನು ನಿಯೋಜಿಸಲಾಗಿದೆ. ಆನೆ ಕಾಡು ಅರಣ್ಯ ವ್ಯಾಪ್ತಿಯ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸದಂತೆ ಸಾಲಕಷ್ಟು ಕಟ್ಟೆಚ್ಚರ ವಹಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಲಾಗುತ್ತಿದೆ. ಆದರೂ ಇಲ್ಲಿ ವಾಹನಗಳ ನಿಲುಗಡೆಗೆ ಕಡಿವಾಣ ಬಿದ್ದಿಲ್ಲ. ಅರಣ್ಯ ಇಲಾಖೆ ಗಸ್ತು ಮತ್ತಷ್ಟು ಹೆಚ್ಚಿಸದಿದ್ದಲ್ಲಿ ಅಪಾಯ ತಪ್ಪಿದಲ್ಲ ಎನ್ನುವುದು ಪರಿಸರ ಪ್ರಿಯರ ಕಾಳಜಿಯಾಗಿದೆ.

ಅರಣ್ಯ ವಲಯ ಸೂಕ್ಷ್ಮ ಪ್ರದೇಶ
ಕಾಳ್ಗಿಚ್ಚಿನ ವಿಷಯದಲ್ಲಿ ಕುಶಾಲನಗರ ಅರಣ್ಯ ವಲಯ ತುಂಬಾ ಸೂಕ್ಷ್ಮ ಪ್ರದೇಶವಾಗಿದೆ. ಆನೆಕಾಡು, ದುಬಾರೆ, ಕಾವೇರಿ ನಿಸರ್ಗಧಾಮ, ಕಲ್ಲೂರು, ಅತ್ತೂರು ಸೇರಿದಂತೆ ಸಾಕಷ್ಟು ವನ್ಯ ಪ್ರದೇಶಗಳು ಬೇಸಿಗೆ ಕಾಲದಲ್ಲಿ ಅರಣ್ಯ ಇಲಾಖೆ ಪಾಲಿಗೆ ಸವಾಲಾಗಿ ಪರಿಣಮಿಸುತ್ತದೆ. ಅದರಲ್ಲೂ ಪ್ರವಾಸಿಗರು ಹೆಚ್ಚು ಭೇಟಿ ಕೊಡುವ ಕಾವೇರಿ ನಿಸರ್ಗಧಾಮ ಮತ್ತು ದುಬಾರೆ ಅರಣ್ಯ ಪ್ರದೇಶದಲ್ಲಿ ಕಾಡನ್ನು ಬೆಂಕಿಯಿಂದ ರಕ್ಷಿಸಲು ಇಲಾಖೆ ಸಿಬ್ಬಂದಿ ಮೈಯೆಲ್ಲಾ ಕಣ್ಣಾಗಿ ಕಾಯುತ್ತಾರೆ. ನೈಸರ್ಗಿಕವಾಗಿ ಬೆಂಕಿ ಕಾಣಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಮಾನವನಿಂದಲೇ ಕಾಳ್ಗಿಚ್ಚು ಹುಟ್ಟಿಕೊಳ್ಳುವುದು ಸಾಮಾನ್ಯವಾಗಿದೆ. ಬೀಡಿ-ಸಿಗರೇಟ್ ಸೇದಿ ಎಸೆಯುವುದರಿಂದ ಅಥವಾ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಸಿಟ್ಟಿನಿಂದ ಕಾಡಿಗೆ ಬೆಂಕಿ ಕೊಡುವುದರಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಕಾಳ್ಗಿಚ್ಚು ಸಂಭವಿಸುತ್ತಿದೆ.

ಬೇಸಿಗೆ ಬಿಸಿಲಿನ ಝಳ ಹೆಚ್ಚಿದ್ದು, ಈಗೊಂದು ಮಳೆ ಬಾರದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ. ರಾಷ್ಟ್ರಿಯ ಹೆದ್ದಾರಿಯಲ್ಲಿ ಆನೆಕಾಡು ಅರಣ್ಯದ ಆರಂಭದಿಂದ ಕೊನೆಯ ವರೆಗೆ ಯಾವುದೇ ಕಾರಣಕ್ಕೂ ವಾಹನಗಳನ್ನು ನಿಲ್ಲಿಸುವುದಕ್ಕೆ ಅವಕಾಶ ಕೊಡಬಾರದು. ಹೀಗೆ ವಾಹನಗಳನ್ನು ನಿಲ್ಲಿಸುವುದರಿಂದ ಅಪಾಯವೇ ಹೆಚ್ಚು.
-ಎಂ.ಎನ್.ಚಂದ್ರಮೋಹನ್, ಪರಿಸರ ಪ್ರೇಮಿ

ಬೆಂಕಿಯಿಂದ ಅರಣ್ಯವನ್ನು ರಕ್ಷಣೆ ಮಾಡಿಕೊಳ್ಳಲು ಇಲಾಖೆ ಎಲ್ಲಾ ಹಂತದಲ್ಲೂ ಸಿದ್ಧತೆ ಮಾಡಿಕೊಂಡಿದೆ. ಜೇನುಕಲ್ಲು ಬೆಟ್ಟ, ನಿಡ್ತ, ಯಡವನಾಡು ಮೀಸಲು ಅರಣ್ಯದ ೬೮ ಕಿ.ಮೀ ಬೆಂಕಿರಸ್ತೆ ಮಾಡಲಾಗಿದೆ. ಎರಡು ವಾಚ್‌ಟವರ್‌ನಲ್ಲಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅಗ್ನಿಶಾಮಕದಳ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಲಿದೆ.
-ಚೇತನ್, ಆರ್.ಎಫ್.ಒ., ಸೋಮವಾರಪೇಟೆ ವಲಯ